ಶಿವಮೊಗ್ಗ: ನಗರದ ಕೇಂದ್ರ ಭಾಗದಲ್ಲಿರುವ ಹಳೆ ಜೈಲಿನ ಸುಮಾರು ೪೦ ಎಕರೆ ಜಾಗವನ್ನು ಅಭಿವೃದ್ಧಿ ಪಡಿಸಿ ದಸರಾ ಆಚರಣೆ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡುವ ನಿಟ್ಟಿನಲ್ಲಿ ಆ.೭ರಂದು ಬೆಂಗಳೂರಿನಲ್ಲಿ ಗೃಹಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ.
ಇಂದು ಶಾಸಕ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಳೆ ಜೈಲಿನ ಸ್ಥಳ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಳೇ ಜೈಲಿನ ಜಾಗ ಒಟ್ಟು ೪೬ ಎಕರೆ ಇದೆ. ಈ ಪೈಕಿ ೪ ಎಕರೆ ಜಾಗದಲ್ಲಿ ಜೈಲಿನ ಕಟ್ಟಡವಿದ್ದು, ಅದನ್ನು ಹಾಗೆಯೇ ಉಳಿಸಿಕೊಂಡು ಬಾಕಿ ಜಾಗವನ್ನು ದಸರಾ ಸೇರಿದಂತೆ ಸಾರ್ವಜನಿಕ ಸಭೆ, ಸಮಾರಂಭ ನಡೆಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುವುದು. ಈ ಬಾರಿಯ ದಸರಾ ಮಹೋತ್ಸವ ಇಲ್ಲಿಯೇ ನಡೆಸಲಾಗುವುದು.
ಸದರಿ ಜಾಗವನ್ನು ಪಾಲಿಕೆ ವಶಕ್ಕೆ ಪಡೆಯಲು ಗೃಹ ಇಲಾಖೆ ಅನುಮತಿ ಬೇಕಿರುವುದರಿಂದ ಇದಕ್ಕಾಗಿ ಸಚಿವರು ಹಾಗೂ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ ಅಧಿಕೃತವಾಗಿ ಜಾಗ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳ ಲಾಗುವುದು ಎಂದರು.
ಅಲ್ಲದೆ ಸಾರ್ವಜನಿಕ ಬಳಕೆಗೆ ಉದ್ದೇಶಿಸಿರುವ ಜೈಲು ಜಾಗವನ್ನು ಸಮತಟ್ಟಾಗಿಸಲು ಆಗುವ ವೆಚ್ಚದ ಪ್ರಸ್ತಾವನೆಯನ್ನು ಲೋಕೋಪ ಯೋಗಿ ಇಲಾಖೆ ಎಂಜಿನಿಯರ್ ಗಳಿಂದ ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಈಶ್ವರಪ್ಪ ತಿಳಿಸಿದರು.
ಆ.೭ರೊಳಗೆ ಜಾಗದ ಅಭಿ ವೃದ್ಧಿಯ ಪ್ರಸ್ತಾವನೆ ಸಿದ್ಧವಿರಬೇಕು, ಬೆಂಗಳೂರಿನ ಸಭೆಯಲ್ಲಿ ಎಲ್ಲವೂ ನಿರ್ಧಾರವಾಗುವ ನಿಟ್ಟಿನಲ್ಲಿ ಸಿದ್ದತೆ ನಡೆಸಲಾಗುವುದು.
ಈ ಹಿಂದೆಯೇ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ಜೈಲು ಜಾಗ ವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಲು ನಿರ್ಧರಿಸಲಾಗಿತ್ತು, ಆದರೆ ಅದಕ್ಕೆ ಅಧಿಕೃತ ಮುದ್ರೆ ಬಿದ್ದಿರ ಲಿಲ್ಲ. ಈಗ ಆ ಪ್ರಕ್ರಿಯೆ ಮಾಡಲಾ ಗುವುದು. ಇದಕ್ಕೆ ಬಂಧಿಖಾನೆ ಇಲಾಖೆ ಅಧಿಕಾರಿಗಳ ಸಹಕಾರ ಪಡೆಯಲಾಗುವುದು ಎಂದರು.
ಜೈಲು ಜಾಗದಲ್ಲಿ ಸಾರ್ವಜನಿಕ ಸಮಾರಂಭ ನಡೆಯುವಾಗ ವಾಹನ ನಿಲುಗಡೆಗೂ ಗಮನ ನೀಡಿ ಸ್ಥಳ ಮೀಸಲಿಡಬೇಕು ಹಾಗೂ ಜೈಲು ಕಾಂಪೌಂಡ್‌ನ ಎರಡು ಭಾಗದಲ್ಲಿ ಪ್ರವೇಶ ದ್ವಾರ ಮಾಡಬೇಕು ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಲೋಕೇಶ್ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ, ಬಿಜೆಪಿ ಪ್ರಮುಖರಾದ ಚನ್ನಬಸಪ್ಪ, ಕಾರ್ಪೋರೇಟರ್ ಸುನೀತಾ ಅಣ್ಣಪ್ಪ, ಸೋಮಸುಂದರ್ ಮತ್ತಿತರರಿದ್ದರು.