ಶಿವಮೊಗ್ಗ : ಲಿಂಗಾಯತ ಒಳಪಂಗಡಗಳಾದ ಪಂಚಮಸಾಲಿ, ಗೌಡ, ಮಲೆಗೌಡ, ಗೌಳಿ, ಹಾಗೂ ದೀಕ್ಷಾ ಲಿಂಗಾಯತರಿಗೆ ರಾಜ್ಯದಲ್ಲಿ ೨ ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿರುವ ಕೂಡಲ ಸಂಗಮದ ಪಂಚಮಸಾಲಿ ಮಠದ ಜಯ ಮೃಂತ್ಯುಜಯ ಸ್ವಾಮೀಜಿ ಗಳು ಮಂಗಳವಾರ ಸಂಜೆ ಇಲ್ಲಿ ಶಾಸಕ ಎಸ್. ಎನ್. ಚನ್ನಬಸಪ್ಪ ಅವರನ್ನು ಭೇಟಿ ಮಾಡಿ, ಮಹತ್ವದ ಮಾತುಕತೆ ನಡೆಸಿದರು.
ಶಿವಮೊಗ್ಗ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಕ್ರಮದಂತೆ ನಗರದ ಶಾಂತಮ್ಮ ಲೇಔಟ್ ನಲ್ಲಿರುವ ಶಾಸಕ ಎಸ್. ಎನ್. ಚನ್ನಬಸಪ್ಪ ಅವರ ನಿವಾಸಕ್ಕೆ ತೆರಲಿದ್ದ ಶ್ರೀಗಳು, ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರಲ್ಲದೆ, ಪಂಚಮ ಸಾಲಿಗಳ ಬಹುದಿನದ ಬೇಡಿಕೆಯಾಗಿರುವ ೨ಎ ಮೀಸಲಾತಿಗೆ ತಾವು ಅಧಿವೇಶನದಲ್ಲಿ ಧ್ವನಿ ಎತ್ತಬೇಕೆಂದು ಮನವಿ ಮಾಡಿದರು.
ಲಿಂಗಾಯತ ಒಳಪಂಗಡಗಳಾದ ಪಂಚಮಸಾಲಿ, ಗೌಡ, ಮಲೆಗೌಡ, ಗೌಳಿ, ಹಾಗೂ ದೀಕ್ಷಾ ಲಿಂಗಾಯತರಿಗೆ ರಾಜ್ಯದಲ್ಲಿ ೨ ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಹೋರಾಟ ನಡೆದಿವೆ. ಪಾದಯಾತ್ರೆಗಳು ಜರುಗಿವೆ. ಉಪವಾಸ, ಅಮರಣಾಂತ ಉಪವಾಸ ಸತ್ಯಾಗ್ರಹಗಳು ಕೂಡ ಆಗಿವೆ. ಇಷ್ಟಾಗಿಯೂ ಆಳುವ ಸರ್ಕಾರಗಳು ನಮ್ಮ ಕೂಗಿಗೆ ಮನ್ನಣೆ ನೀಡಿಲ್ಲ ಎನ್ನುವುದು ದುರಂತವೇ ಆಗಿದೆ. ಪಂಚಮಸಾಲಿಗಳನ್ನು ಈ ಮಟ್ಟಕ್ಕೆ ಕಡೆಗಣಿಸುವುದು ಸರಿಯಲ್ಲ. ಹಾಗಾಗಿ ತಾವು ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಮಾತನಾಡಿ, ಇನ್ನೇನು ರಾಜ್ಯ ಸರಕಾರದ ಮುಂಗಾರು ಅಧಿವೇಶನ ಶುರುವಾಗಲಿದೆ. ಅಲ್ಲಿ ನಮ್ಮ ಬೇಡಿಕೆಯ ಬಗ್ಗೆ ಜನಪ್ರತಿನಿಧಿಗಳು ಮಾತನಾಡಬೇಕು, ವಿಧಾನಸಭೆಯಲ್ಲಿ ಬಾವಿಗಿಳಿದು ನಮ್ಮ ಹಕ್ಕನ್ನು ಪ್ರತಿಪಾದಿಸುವಂತೆ ಮನವಿ ಮಾಡುವ ಸಲುವಾಗಿ ನಮ್ಮ ಸಮಾಜದ ಶಾಸಕರುಗಳ ಮನೆಗೆ ಶ್ರೀಗಳೊಂದಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅದರ ಭಾಗವಾಗಿಯೇ ಶಾಸಕ ಎಸ್. ಎನ್. ಚನ್ನಬಸಪ್ಪ ಅವರನ್ನು ಭೇಟಿ ಮಾಡಿ, ನಮ್ಮ ಆಗ್ರಹ ಪತ್ರವನ್ನು ಸಲ್ಲಿಸಿದ್ದೇವೆ ಎಂದರು.
ಲಿಂಗಾಯತ ಒಳಪಂಗಡಗಳಾದ ಪಂಚಮಸಾಲಿ, ಗೌಡ, ಮಲೆಗೌಡ, ಗೌಳಿ, ಹಾಗೂ ದೀಕ್ಷಾ ಲಿಂಗಾಯತರಿಗೆ ರಾಜ್ಯದಲ್ಲಿ ೨ಎ ಮೀಸಲಾತಿಗೆ ಹಾಗೂ ಕೇಂದ್ರದಲ್ಲಿ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳಿಗೆ ಒಬಿಸಿ ಮೀಸಲಾತಿಗೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಈಗ ಪಂಚಮಸಾಲಿಗಳ ನೇತೃತದಲ್ಲಿ 7ನೇ ಹಂತದ ಚಳವಳಿ ಆರಂಭವಾಗಿದೆ. ಅದರ ಭಾಗವಾಗಿಯೇ ಈಗ ಶಾಸಕರನ್ನು ಭೇಟಿ ಮಾಡುತ್ತಿದ್ದೇವೆ ಎಂದರು.