ಶಿವಮೊಗ್ಗ :-ಸ್ವಾತಂತ್ರ್ಯ ಹೋರಾಟದ ನೆನಪು ಇವತ್ತಿನ ವಿದ್ಯಾರ್ಥಿಗಳಿಗೆ ಮಹತ್ವದ್ದಾಗಿದೆ. ನಮ್ಮ ವಿದ್ಯಾರ್ಥಿಗಳಿಗೆ ಇತಿಹಾಸದ ಮಹತ್ವದ ಘಟನೆಗಳನ್ನು ಓದುವ, ಬರೆಯುವ ಅಭ್ಯಾಸ ಮಾಸಿಹೋಗುವ ಹೊತ್ತಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮೂಲಕ ಅರಿಯುವಂತೆ ಮಾಡಿರುವುದು ಅರ್ಥಪೂರ್ಣ ಎಂದು ಪ್ರಶಂಸೆ ವ್ಯಕ್ತಪಡಿಸಿದವರು ಆಕಾಶ್ ಇನ್ ಹೋಟೆಲ್ ಉದ್ಯಮಿಗಳಾದ ಹೊಸತೋಟ ಸೂರ್ಯನಾರಾಯಣ ಅವರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ನಾಡಿನ ಕೊಡುಗೆ ವಿಚಾರವಾಗಿ ಸಾಹಿತ್ಯ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುವುದರ ಜೊತೆಯಲ್ಲಿ ಕನ್ನಡವನ್ನು ಸರಿಯಾಗಿ ಕಲಿಯಿರಿ. ಚನ್ನಾಗಿ ಓದಲು, ಬರೆಯಲು, ಮಾತನಾಡಲು ಕಲಿಯಿರಿ. ಸ್ಫರ್ಧಾ ಮನೋಭಾವ ಬೆಳಸಿಕೊಳ್ಳಿ. ಅದರ ಪ್ರಯೋಜನ ಪಡೆದುಕೊಳ್ಳಿ ಎಂದು ಹಿತನುಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ ಒಂದು ಶಾಲೆಯ ಐವರು ವಿದ್ಯಾರ್ಥಿಗಳ ಒಂದು ತಂಡ ಭಾಗವಹಿಸುವಂತೆ ನಿಗದಿ ಪಡಿಸಿದ ಉದ್ದೇಶ ಹೆಚ್ಚು ಜನರು ವಿಚಾರಗಳನ್ನು ಅವಲೋಕಿಸಲಿ ಎನ್ನುವ ಕಾರಣಕ್ಕೆ. ನೀವು ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು. ಮೋದಲ ಪ್ರಶ್ನೆ ಕುವೆಂಪು ಅವರು ಸ್ವಾತಂತ್ರ್ಯ ಚಳುವಳಿಗಾಗಿ ಬರೆದ ಎರಡು ಪ್ರಮುಖ ಪದ್ಯಗಳಿವೆ. ಒಂದು ಪದ್ಯವನ್ನು ಹೆಸರಿಸಿ ಎಂದು ಕೇಳಿದರೆ ಯಾರೂ ಹೇಳಲಿಲ್ಲ. ತೀರ್ಥಹಳ್ಳಿ ತಾಲ್ಲೂಕಿನ ಮಕ್ಕಳೂ ಹೇಳದಿರುವುದು ಆಶ್ಚರ್ಯ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆಮುಂದೆ, ಹಿಗ್ಗದೆಯೆ ಕುಗ್ಗದೆಯೆ ನುಗ್ಗಿ ನಡೆಮುಂದೆ ಕವನ ಮರೆಯಬಾರದು ಎಂದು ವಿವರಿಸಿದರು.
ಇಪ್ಪತ್ಮೂರು ತಂಡಗಳಿಗೂ ಒಬ್ಬೋಬ್ಬ ರಾಷ್ಟನಾಯಕರ ಹೆಸರಿಟ್ಟಿದ್ದು. ಮೈಸೂರಿನಿಂದ ಆಗಮಿಸಿದ್ದ ಜನಪದ ಕಲಾ ತಂಡದವರು ಜನಪದ ಹಾಡು ಹಾಡಿದ್ದು ಕಾರ್ಯಕ್ರಮದ ಮೆರಗು ಹೆಚ್ಚಿಸಿತ್ತು.
ವೇದಿಕೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟ ಡಾ. ಜಿ. ಆರ್. ಲವ, ಎಂ. ನವೀನ್ ಕುಮಾರ್, ಮಹಾದೇವಿ, ಕೃಷ್ಣಮೂರ್ತಿ ಹಿಳ್ಳೋಡಿ, ತ.ಮ. ನರಸಿಂಹ, ಎಚ್. ಎಸ್. ರಘು, ಕೋಡ್ಲು ಯಜ್ಞಯ್ಯ, ಭೈರಾಪುರ ಶಿವಪ್ಪಗೌಡ, ಚುರ್ಚುಗುಂಡಿ ಬಾಲರಾಜ್, ಕುಬೇರಪ್ಪ ಉಪಸ್ಥಿತರಿದ್ದರು.
ಬಹುಮಾನ ಪಡೆದವರು : ಮೊದಲ ಬಹುಮಾನ ಸರ್ಕಾರಿ ಪ್ರೌಢಶಾಲೆ, ಹೊಸೂರು ಗುಡ್ಡೇಕೇರಿ, ತೀರ್ಥಹಳ್ಳಿ, ದ್ವಿತೀಯ ಬಹುಮಾನ ಎರಡು ತಂಡಗಳು ಹಂಚಿಕೊಂಡಿವೆ. ಜ್ಞಾನಗಂಗಾ ವಿದ್ಯಾಸಂಸ್ಥೆ ,ಶಿವಮೊಗ್ಗ, ಪುಷ್ಪ ಆಂಗ್ಲ ಮಾಧ್ಯಮ ಶಾಲೆ, ಶಿಕಾರಿಪುರ, ತೃತೀಯ ಬಹುಮಾನ ಅಕ್ಷರ ರೆಸಿಡೆನ್ಸಿಯಲ್ ಸ್ಕೂಲ್, ಶಿಕಾರಿಪುರ ಪಡೆದಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ಪತ್ರ ನೀಡಲಾಯಿತು.