ಶಿವಮೊಗ್ಗ : ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಪ್ರಚಾರ ತಾರಕಕ್ಕೇರಿದೆ. ಕಣದಲಿರುವ ಆಯಾ ಪಕ್ಷಗಳು ಕ್ಷೇತ್ರದ ಉದ್ದಕ್ಕೂ ಬಿರುಸಿನ ಪ್ರಚಾರ ಕೈಗೊಂಡಿದ್ದು,ತಮ್ಮ ತಮ್ಮ ಕಾರ್ಯತಂತ್ರಗಳ ಮೂಲಕ ಮತದಾರರನ್ನು ಸೆಳೆಯುವಲ್ಲಿ ಹರಸಾಹಸ ಹಾಕುತ್ತಿದ್ದಾರೆ. ಈ ನಡುವೆಯೇ ಈಗ ಪಕ್ಷದ ಹಿರಿಯ ನಾಯಕರು ಕೂಡ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿಯುತ್ತಿದ್ದು, ಪ್ರಚಾರದ ಕಣ ರಂಗೇರುವಂತಾಗಲಿದೆ.
ಬಿಜೆಪಿ ಪಕ್ಷದ ಅಧಿಕೃತ ಮೂಲಗಳ ಪ್ರಕಾರ ಮೇ ೨೬ ರಿಂದ ಪಕ್ಷದ ಅಭ್ಯರ್ಥಿಗಳ ಪರವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಚಾರಕ್ಕಿಳಿಯುತ್ತಿದ್ದಾರೆ. ಮೇ ೨೬, ೨೭ ಮತ್ತು ೨೮ರಂದು ಮೂರು ದಿನಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರ ಮೈತ್ರಿ ಅಭ್ಯರ್ಥಿ ಭೋಜೇಗೌಡರ ಪರವಾಗಿ ಬಿರುಸಿನ ಪ್ರಚಾರ ನಡೆಸಲಿದ್ದಾರೆಂದು ಹೇಳಲಾಗಿದೆ.
ಇದೇ ವೇಳೆ ಮೇ. ೩೦ ರಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳಲು ಶಿವಮೊಗ್ಗಕ್ಕೆ ಬರಲಿದ್ದಾರೆಂದು ಹೇಳಲಾಗಿದೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಯಾಕೆಂದರೆ ನೈರುತ್ಯ ಪದವೀಧರ ಕ್ಷೇತ್ರ ರಚನೆಯಾದ ದಿನಗಳಿಂದಲೂ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನ್ನುವ ಹೆಗ್ಗಳಿಕೆ ಇದೆ. ಈ ಪ್ರತಿಷ್ಠೆಯನ್ನು ಉಳಿಸಿಕೊಳ್ಳಬೇಕಾದರೆ ಡಾ. ಧನಂಜಯ ಸರ್ಜಿ ಅವರು ಗೆಲುವು ಬಿಜೆಪಿಗೆ ಅನಿವಾರ್ಯ. ಅದೇ ಕಾರಣದಿಂದಲೇ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಪ್ರಚಾರ ನಡೆಸಲು ಶಿವಮೊಗ್ಗಕ್ಕೆ ಬರುತ್ತಿದ್ಧಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೂ ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿನ ಪಕ್ಷದ ಅಭ್ಯರ್ಥಿಗಳ ಗೆಲುವು ಅನಿವಾರ್ಯವೇ ಆಗಿದೆ. ರಾಜಾಧ್ಯಕ್ಷರಾಗಿ ಅವರು ತವರು ಜಿಲ್ಲೆಯಲ್ಲಿ ಪರಿಷತ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕಿದೆ. ಆ ಮೂಲಕ ಪಕ್ಷದ ವರ್ಚಸ್ಸು ಉಳಿಸಿಕೊಳ್ಳಬೇಕಿದೆ. ಅದೇ ಕಾರಣಕ್ಕೆ ಅವರು ಮೇ ೨೬ ರಿಂದ ೨೮ ರವರೆಗೆ ಮೂರು ದಿನಗಳ ಕಾಲ ಶಿವಮೊಗ್ಗದಲ್ಲಿಯೇ ಇದ್ದು, ಪರಿಷತ್ತಿನ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆನ್ನಲಾಗಿದೆ.
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಬಿಜೆಪಿಗೆ ಹಿಂದಿನಂತೆ ಸುಲಭವಾಗಿಲ್ಲ. ಪಕ್ಷದ ನಾಯಕ ರಘುಪತಿ ಭಟ್ ಅವರೇ ಈಗ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಗೆಯೇ ಇಲ್ಲಿ ಒಂದೇ ಸಮುದಾಯದ ಅಭ್ಯರ್ಥಿಗಳು ಕಾಂಗ್ರೆಸ್ ಮತ್ತು ಪಕ್ಷೇತತರಾಗಿಯೂ ಕಣದಲ್ಲಿರುವುದು ಸವಾಲಾಗಿ ಪರಿಣಮಿಸಿದೆ. ಪಕ್ಷದ ವರ್ಚಸ್ಸಿನ ನಡುವೆಯೇ ಬಿಜೆಪಿ ಇದನ್ನು ಎದುರಿಸಬೇಕಿದೆ. ಇವೆಲ್ಲ ಕಾರಣಕ್ಕೆ ತಮ್ಮದೇ ತಂತ್ರಗಾರಿಕೆಯ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಕ್ಷದ ಅಭ್ಯರ್ಥಿಗಳ ಪರವಾದ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆಂದು ಮೂಲಗಳು ತಿಳಿಸಿವೆ.