ಶಿವಮೊಗ್ಗ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ ೧ರಿಂದ ೧೨ರವರೆಗೆ ಜಿಲ್ಲೆಯಾದ್ಯಂತ ಸಾರ್ವಜನಿಕರ ಸಹಕಾರದೊಂದಿಗೆ ಪ್ಲಾಸ್ಟಿಕ್ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಲೋಕೇಶ್ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ರೂಪುರೇಶೆ ಸಿದ್ಧಪಡಿಸಲು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಇಂದು ಕರೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಗಳನ್ನು ಈಗಾಗಲೇ ನಿಷೇಧಿಸಲಾಗಿ ದ್ದರೂ, ಇನ್ನೂ ಮಾರುಕಟ್ಟೆಯಲ್ಲಿ ಬಳಕೆಯಲ್ಲಿವೆ. ಅಭಿಯಾನದ ಅವಧಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಕಾರ್ಯಾ ಚರಣೆ ನಡೆಸಬೇಕು ಎಂದರು.
ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಬೇಕು. ಈ ಅವಧಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಇಡೀ ಜಿಲ್ಲೆಯನ್ನು ರಾಜ್ಯದಲ್ಲೇ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಸಹಕರಿಸಬೇಕು. ಇದಕ್ಕಾಗಿ ನಗರಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸುವಂತೆ ಸೂಚನೆ ನೀಡಿದರು.
ಜೋಗ ಜಲಪಾತಕ್ಕೆ ತೆರಳುವ ರಸ್ತೆ, ಹಾದಿಯಲ್ಲಿನ ಎಲ್ಲಾ ಪ್ಲಾಸ್ಟಿಕ್ ಗಳನ್ನು ಸಂಗ್ರಹಿಸಬೇಕು. ಇನ್ನಿತರ ಪ್ರವಾಸಿ ತಾಣಗಳು, ದೇವಾಲಯ ಗಳು, ಕಲ್ಯಾಣ ಮಂಟಪಗಳು, ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು. ಪ್ರವಾಸಿ ತಾಣ ಗಳು, ಸರ್ಕಾರಿ ಕಚೇರಿಗಳ ಪ್ರವೇಶ ದ್ವಾರದಲ್ಲಿ ಪ್ಲಾಸ್ಟಿಕ್ ಸಂಗ್ರಹ ಚೀಲ ಇಟ್ಟು, ತಮ್ಮಲ್ಲಿರುವ ಪ್ಲಾಸ್ಟಿಕ್‌ಗಳನ್ನು ಅದರಲ್ಲಿ ಹಾಕುವಂತೆ ಸಾರ್ವ ಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ರಸ್ತೆ ಬದಿಯಲ್ಲಿ ಪಾನಿಪೂರಿ ಸೇರಿದಂತೆ ಸಿದ್ಧ ಆಹಾರ ಮಾರಾಟ ಮಾಡುವವರು ಶುಚಿತ್ವ ಪಾಲಿಸಲು ಕ್ರಮ ಕೈಗೊಳ್ಳಬೇಕು. ಅವರಿಗೆ ಕೈಗವಸು ಬಳಕೆ ಕಡ್ಡಾಯ ಗೊಳಿಸಬೇಕು. ಆಹಾರ ತಿಸಿಸುಗಳನ್ನು ನ್ಯೂಸ್ ಪೇಪರ್‌ನಲ್ಲಿ ಕಟ್ಟಿ ನೀಡು ವುದನ್ನು ನಿರ್ಬಂಧಿಸಲಾಗಿದ್ದು, ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಜಪ್ಪ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.