ಶಿವಮೊಗ್ಗ: ರಾಜ್ಯ ಮಟ್ಟದಲ್ಲಿ ಎಎಪಿಯನ್ನು ಬಲವರ್ಧನೆಗೊಳಿಸಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಮನೋಹರ ಗೌಡ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೂತನವಾಗಿ ಆಯ್ಕೆ ಮಾಡಿದ್ದೇವೆ ಎಂದು ಅಮ್ ಆದ್ಮಿಯ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಹೇಳಿದರು.
ಶುಕ್ರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಣ ವರ್ಗಾವಣೆ ವಿಚಾರದಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಕೇಂದ್ರ ಸರಕಾರ ನಡೆಸುತ್ತಿರುವ ಸವಾರಿಯನ್ನು ನಿಲ್ಲಿಸಬೇಕು. ನಮ್ಮದು ನ್ಯಾಯಸಮ್ಮತ, ಭ್ರಷ್ಟಾಚಾರ ರಹಿತ ನಾಯಕತ್ವ. ಇದನ್ನು ಹತ್ತಿಕ್ಕುವ ಪ್ರಯತ್ನವನ್ನು ಸರಕಾರ ಮಾಡಬಾರದೆಂದು ಒತ್ತಾಯಿಸಿದರು.
ಒಂದು ರೂ.ವನ್ನು ಮತದಾರರಿಗೆ ಹಂಚಿಕೆ ಮಾಡದೆ ದಕ್ಷ ಆಡಳಿತ ಕಾರಣಕ್ಕಾಗಿ ದೇಶದ ಎರಡು ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿರುವ ಪಕ್ಷ ಎಎಪಿಯಾಗಿದೆ. ನಮ್ಮ ಪಕ್ಷದಲ್ಲಿ ಯಾವುದೇ ರಾಜಕೀಯ ಹಿನ್ನಲೆಯಿಲ್ಲದ ವ್ಯಕ್ತಿಗಳು ಸಂಸದರು, ಶಾಸಕರಾಗಿದ್ದಾರೆ. ಪಂಚರ್ ಹಾಕುವ ವ್ಯಕ್ತಿ, ಸಾಮಾನ್ಯ ಬಡವ ಕೂಡ ನಮ್ಮ ಪಕ್ಷದಿಂದ ಶಾಸಕನಾಗಿದ್ದಾನೆ. ದುಡ್ಡಿಲ್ಲದೆ ಗೆಲ್ಲುವುದು, ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವ ವ್ಯಕ್ತಿಗಳನ್ನು ಬೆಳೆಸುವುದು ನಮ್ಮ ಪಕ್ಷದ ಗುರಿಯಾಗಿದೆ ಎಂದರು.
ಇದನ್ನೆಲ್ಲಾ ತಿಳಿದುಕೊಂಡಿರುವ ಕೆಲ ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಪಕ್ಷದ ನಾಯಕರ ಕುರಿತು ಭಯವುಂಟಾಗಿದೆ. ಇದರ ಪರಿಣಾಮವಾಗಿ ಅರವಿಂದ್ ಕೇಜ್ರಿವಾಲ್ ಅಂತಹವರು ಜೈಲು ಪಾಲಾಗುವ ಪರಿಸ್ಥಿತಿ ಬಂದಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾವೆಲ್ಲಿ ಜೈಲಿಗೆ ಹೋಗಬೇಕಾಗುತ್ತದೆಯೋ ಎಂಬ ಭಯ ಅವರನ್ನು ಅವರಿಸಿದೆ. ರಾಮನ ಹೆಸರಿನಲ್ಲಿ ಅಯೋದ್ಯೆಯಲ್ಲಿ ಅವರು ರಾಜಕೀಯ ಮಾಡಿ ಬಿಜೆಪಿಗೆ ಗೆಲುವು ತಂದುಕೊಳ್ಳಲು ಸಾಧ್ಯವಾಗಲಿಲ್ಲ. ಸೀತಾಪುರ, ಅಂಜನಾಪುರದಂತಹ ಪ್ರದೇಶಗಳಲ್ಲಿ ಅವರಿಗೆ ಸೋಲು ಉಂಟಾಗಿರುವುದು ಭಗವಂತ ಅವರಿಗೆ ಕೊಟ್ಟಿರುವ ಶಿಕ್ಷೆಯಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರಕಾರವು ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಮಾಡುವ ಮೊದಲು ಯೋಚಿಸಬೇಕಿತ್ತು. ದಿಲ್ಲಿಯಲ್ಲಿ 47 ಸಾವಿರ ಕೋಟಿ ರೂ. ಬಜೆಟ್ ಅನ್ನು ೮೦ ಸಾವಿರ ಕೋಟಿಗೆ ಎಎಪಿ ಏರಿಸಿದೆ. ಸುಮಾರು ೪೭ ಸಾವಿರ ಕೋಟಿ ರೂ. ಇದ್ದ ಸಾಲವನ್ನು 37 ಸಾವಿರ ಕೋಟಿ ರೂ. ಗೆ ಇಳಿಸಿದ್ದೇವೆ. ಇದೆಲ್ಲವನ್ನು ರಾಜ್ಯ ಸರಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು. ದಿಲ್ಲಿಯಲ್ಲಿ ಜಿಎಸ್ ಟಿ ಹೊರತುಪಡಿಸಿ ಯಾವುದೇ ಆದಾಯದ ಮೂಲಗಳಿಲ್ಲ ಎಂಬುದನ್ನು ಗಮನಿಸಬೇಕು ಎಂದು ಮಾಹಿತಿ ನೀಡಿದರು.
ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನಾವು ಸ್ವಾಗತಿಸುತ್ತೇವೆ. ಆದೇ ಸಮಯದಲ್ಲಿ ೩ ತಿಂಗಳಿಗೆ ೧೬ ಸಾವಿರ ಕೋಟಿ ರಸ್ತೆ ಶುಲ್ಕವನ್ನು ಕಟ್ಟುವ ಖಾಸಗಿ ಬಸ್ ಮಾಲಿಕರ, ಚಾಲಕರ, ಕಂಡಕ್ಟರ್ ಮೇಲೆ ಆಗುವ ದುಷ್ಟರಿಣಾಮಗಳನ್ನು ಗಮನಿಸಬೇಕು. ಕೊನೆ ಪಕ್ಷ ಇವರು ಕಟ್ಟುವ ರಸ್ತೆ ಶುಲ್ಕವನ್ನಾದರೂ ಮನ್ನಾ ಮಾಡಿದರೆ ಇದಕ್ಕೆ ಪರಿಹಾರ ದೊರೆಯುತ್ತದೆ. ಇದನ್ನು ರಾಜ್ಯ ಸರಕಾರ ಆದ್ಯತೆ ಮೇರೆಗೆ ಪರಿಹರಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.
ಕೇಂದ್ರ ಸರಕಾರ ಮೆಡಿಕಲ್ ಕಾಲೇಜುಗಳ ವಿಷಯದಲ್ಲಿ ರಾಜ್ಯ ಸರಕಾರಗಳ ಮೇಲೆ ಸವಾರಿ ಮಾಡುತ್ತಿದೆ. ಬಿಜೆಪಿಯು ಈ ಕೆಟ್ಟ ನೀತಿಯನ್ನು ಬಿಡಬೇಕು. ರಾಜ್ಯಕ್ಕೆ ಸಂಬಂಧಿಸಿದ ಮೆಡಿಕಲ್ ಕಾಲೇಜುಗಳಿಗೆ ಪರೀಕ್ಷೆ ನಡೆಸುವ ಹಕ್ಕನ್ನು ರಾಜ್ಯಕ್ಕೆ ಬಿಟ್ಟುಕೊಡಬೇಕು. ನೀಟ್ ಪರೀಕ್ಷೆಯಿಂದ ಕೇಂದ್ರ ಸ್ವಾಮ್ಯದ ಕಾಲೇಜುಗಳು ಶೇ.೫೦ರಷ್ಟು ಪಾಲು ಪಡೆಯುತ್ತಿವೆ. ನಮ್ಮ ರಾಜ್ಯವು ಶೇ.೫ರಷ್ಟು ಪಡೆದುಕೊಳ್ಳುವುದು ಕಷ್ಟವಾಗುತ್ತಿದೆ. ನೀಟ್ ನಲ್ಲಿ ಆಗಿರುವ ಅನಾಹುತಕ್ಕೆ ದರ್ಮೆಂದ್ರ ಪ್ರದಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯವು ನೀಡುವ ತೆರಿಗೆ ವಿಷಯದಲ್ಲಿ ಕೇಂದ್ರವು ೪ನೇ ಎರಡು ಭಾಗವನ್ನು ತನ್ನಲ್ಲಿ ಉಳಿಸಿಕೊಂಡು ಒಂದು ಭಾಗವನ್ನು ಇತರ ರಾಜ್ಯಗಳಿಗೆ ಇನ್ನೊಂದು ಭಾಗವನ್ನು ನಮ್ಮ ರಾಜ್ಯಕ್ಕೆ ಕಡ್ಡಾಯವಾಗಿ ಕೊಡಬೇಕು ಎಂದು ಒತ್ತಾಯಿಸಿದರು.
ಜನಸಾಮಾನ್ಯರ ಪರ ಆಡಳಿತ ನಡೆಸುವುದಕ್ಕೆ ನಮ್ಮ ಪಕ್ಷ ಯಾವಾಗಲೂ ಸಿದ್ದವಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನೂತನ ಸಮಿತಿ ರಚನೆಯಾಗಿದೆ. ಅಧ್ಯಕ್ಷರನ್ನಾಗಿ ಮನೋಹರ ಗೌಡ ಅವರನ್ನು ಆಯ್ಕೆ ಮಾಡಿದ್ದೇವೆ. ಮುಂಬರುವ ಕಾರ್ಪೊರೇಶನ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ತಳಮಟ್ಟದಲ್ಲಿ ಸಂಘಟನೆ ಮಾಡಿ ಸದೃಢ ಪಕ್ಷವನ್ನು ಕಟ್ಟಿ, ಜನರ ಕಷ್ಟ ಕಾರ್ಪಣ್ಯವನ್ನು ಹೋಗಲಾಡಿಸುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಎಪಿಯ ನೂತನ ಅಧ್ಯಕ್ಷ ಮನೋಹರ ಗೌಡ, ಪದಾಧೀಕಾರಿಗಳಾದ ನಝೀರ್, ಕಿರಣ, ಚಂದ್ರಶೇಖರ್, ರಾಜ, ಲಿಂಗರಾಜ್, ಹರೀಶ್ ಶಕೀರ್ ಅಹ್ಮದ್ ಉಪಸ್ತಿತರಿದ್ದರು.