ಶಿವಮೊಗ್ಗ: ಜಿಲ್ಲೆಯಲ್ಲಿ ಜೆಡಿಎಸ್ ಚುನಾವಣಾ ಸಿದ್ದತೆಯನ್ನು ಮಾಡಿಕೊಂಡಿದೆ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ಹೇಳಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆ ಇನ್ನೇನು ಸಮೀಪವಾಗುತ್ತಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್ ಸಿದ್ದತೆ ಮಾಡಿಕೊಳ್ಳುತ್ತಿದೆ. ಇನ್ನು ಮೂರು ದಿನದಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದ ಪ್ರಚಾರವನ್ನು ಆರಂಭಿಸುತ್ತಿದ್ದೇವೆ. ಅಭ್ಯರ್ಥಿಗಳಿಗೆ ಕಡಿಮೆ ಸಮಯ ಇರುವುದರಿಂದ ಪ್ರಚಾರ ಕಾರ್ಯಕ್ರಮವನ್ನು ತಕ್ಷಣದಿಂದಲೇ ಕೈಗೊಂಡಿದ್ಧೇವೆ ಎಂದರು.
ಏ.೫ಕ್ಕೆ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಶಿಕಾರಿಪುರಕ್ಕೆ ಆಗಮಿಸಲಿದ್ಧಾರೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಈಗಾಗಲೇ ಜೆಡಿಎಸ್ ಸುಮಾರು ೧೨೬ ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಎಲ್ಲೆಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆಯೋ ಅಲ್ಲಲ್ಲಿ ಹೆಚ್ಚು ಪ್ರಚಾರ ಮಾಡಲಾಗುವುದು ಎಂದ ಅವರು, ಪಕ್ಷದ ಜೊತೆಗೆ ಅಭ್ಯರ್ಥಿಗಳ ಕರ್ತವ್ಯವೂ ಮುಖ್ಯ. ಹಾಗಾಗಿ ಅವರು ಕೂಡ ವಯುಕ್ತಿಕವಾಗಿ ಚುನಾವಣೆಗೆ ಸಿದ್ದರಾಗಿದ್ದಾರೆ ಎಂದರು.
ಅಮಿತ್ ಶಾ ರಾಜ್ಯಕ್ಕೆ ಬಂದು ಹೋಗಿದ್ದರಿಂದ ಯಾವ ಪರಿಣಾಮವೂ ಬೀರಿಲ್ಲ. ಅಲ್ಲದೇ ಅವರು ಜಿಲ್ಲೆಯ ಜನರನ್ನು ವಂಚಿಸಿದ್ಧಾರೆ. ತೀರ್ಥಹಳ್ಳಿಯಲ್ಲಿ ಅಡಿಕೆ ಬೆಳೆಗಾರರ ಹೆಸರಿನಲ್ಲಿ ಸುಳ್ಳು ಸಮಾವೇಶ ಮಾಡಿ ಮೋಸ ಮಾಡಿದ್ದಾರೆ. ಒಂದು ಕಡೆ ಅವರ ಪಕ್ಷದ ಕೇಂದ್ರ ಸಚಿವರು ಅಡಿಕೆ ಹಾನಿಕರ ಎಂದು ಹೇಳಿದರೆ, ಇವರು ಹಾನಿಕರ ಅಲ್ಲ ಎಂದು ಹೇಳುತ್ತಾರೆ. ಅಡಿಕೆಯನ್ನು ಹಾನಿಕಾರಕ ಪದಾರ್ಥ ಪಟ್ಟಿಯಿಂದ ಹೊರತೆಗೆಯುತ್ತೇವೆ ಎಂದು ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಯಾರೂ ಹೇಳಲಿಲ್ಲ ಎಂದರು.
ಅಮಿತ್ ಶಾ ರೈತರೊಂದಿಗೆ ಸಂದಾನಕ್ಕೆ ಬಂದಂತೆ ಇತ್ತು. ಶಿವಮೊಗ್ಗದ ಜನರನ್ನು ಇದಕ್ಕಾಗಿ ಬಳಸಿಕೊಂಡಿದ್ದಾರೆ. ರೈತರಿಗೆ ಯಾವ ಯೋಜನೆಯನ್ನು ಘೋಷಿಸಿಲ್ಲ. ರಾಷ್ಟ್ರಿಯ ಪಕ್ಷಗಳು ತಮ್ಮ
ಸ್ವಾರ್ಥಕ್ಕಾಗಿ ರಾಜ್ಯದ ಜನರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು,ದಾವಣಗೆರೆಯಲ್ಲಿ ಅಮಿತ್ ಶಾ ಮುಷ್ಟಿಧಾನ್ಯವನ್ನು ಸ್ವೀಕರಿಸಿದರು. ಈಗ ರಾಜ್ಯದ ರೈತರಿಗೆ ಬೇಕಾಗಿರುವುದು ಮುಷ್ಟಿ ಧಾನ್ಯವಲ್ಲ. ಆ ಧಾನ್ಯಕ್ಕೆ ಬೇಕಾಗಿರುವುದು ಬೆಂಬಲ ಬೆಲೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ವಿರೋಧಿಯಾಗಿವೆ. ಮೆಣಸಿಗೂ ಕೂಡ ಬೆಂಬಲ ಬೆಲೆ ಕೊಡುತ್ತಿಲ್ಲ. ಆಮದಿಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಮೋದಿ ಚುನಾವಣಾ ಗಿಮಿಕ್ ಮಾಡುವುದು ಬಿಟ್ಟು ರಾಜ್ಯದ ಜನರ ಹಿತ ಕಾಪಾಡಲಿ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಹೆಚ್.ಎನ್.ನಿರಂಜನ್, ನಾಗರಾಜ್ ಕಂಕಾರಿ, ಏಳುಮಲೈ ಬಾಬು, ಜಿ.ಡಿ.ಮಂಜುನಾಥ್, ಸುನಿಲ್ ಕುಮಾರ್, ತ್ಯಾಗರಾಜ್ ಸೇರಿದಂತೆ ಹಲವರಿದ್ದರು.