ಶಿವಮೊಗ್ಗ : ಚಲನಚಿತ್ರ ಅತ್ಯಂತ ಪ್ರಭಾವೀ ಮಾಧ್ಯಮವಾಗಿದ್ದು, ಸದಭಿ ರುಚಿಯ ಚಿತ್ರಗಳಿಂದ ಪ್ರೇಕ್ಷಕರ ಮನೋ ವಿಕಾಸ ಸಾಧ್ಯ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಚಲನಚಿತ್ರ ಕಲಾವಿದ ಎಂ.ಕೆ.ಮಠ ಹೇಳಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿ ಮಂಡಲ, ಸಿನಿಮೊಗೆ ಚಿತ್ರ ಸಮಾಜಗಳ ಸಹಯೋಗ ದೊಂದಿಗೆ ಹೆಚ್‌ಪಿಸಿ ಚಿತ್ರಮಂದಿರದಲ್ಲಿ ನ. ೧೭ರಿಂದ ೨೩ರವರೆಗೆ ಆಯೋಜಿಸಲಾದ ಅಪರೂಪದ ಪ್ರಶಸ್ತಿ ಪುರಸ್ಕೃತ ಚಿತ್ರಗಳ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಚಲನಚಿತ್ರ ನಿರ್ಮಾಣ ಹಾಗೂ ಪ್ರದರ್ಶನಗಳ ವ್ಯಾಖ್ಯಾನವೇ ಬದಲಾ ಗಿರುವುದರಿಂದ ಚಲನಚಿತ್ರಗಳು ಪ್ರೇಕ್ಷಕರನ್ನು ಬಹುಬೇಗ ತಲುಪುವುದು ಸಾಧ್ಯವಾಗಿದೆ ಎಂದರು.
ಒಂದು ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವುದೇ ಒಂದು ಸವಾಲಾಗಿತ್ತು. ಆದರೆ, ಈಗ ವಾರ್ತಾ ಇಲಾಖೆಯೇ ಶ್ರೇಷ್ಟ ಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇಲಾಖೆಯ ಈ ಸಾರ್ಥಕ ಕಾರ್ಯಕ್ಕೆ ಬೆಳ್ಳಿಮಂಡಲದಂತಹ ಚಿತ್ರ ಸಮಾಜಗಳು ಸಹಕಾರಿಯಾಗಿವೆ ಎಂದ ಅವರು, ಈ ರೀತಿಯ ಅಪರೂಪದ ಚಿತ್ರ ಗಳನ್ನು ವೀಕ್ಷಿಸುವುದರ ಮೂಲಕ ಕನ್ನಡ ಚಿತ್ರರಂಗವನ್ನು ಉಳಿಸಿ ಬೆಳಬೇಕಾದ ಜವಾಬ್ದಾರಿ ಸಮಾಜಕ್ಕಿದೆ ಎಂದರು.
ಚಲನಚಿತ್ರ ಕೇವಲ ಮನರಂಜನೆ ಆಷ್ಟೇ ಅಲ್ಲ. ಅದರ ಜೊತೆ ಜೊತೆಯಲ್ಲಿಯೇ ಬೌದ್ಧಿಕ ವಿಕಾಸಕ್ಕೂ ಕಾರಣವಾಗಬೇಕು ಎಂದು ಆಶಿಸಿದ ಅವರು, ಅದೃಷ್ಟವಶಾತ್ ಇಂದು ಕನ್ನಡ ಚಿತ್ರರಂಗವೂ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಹೊಸ ಹೊಸ ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಈ ನಿಟ್ಟಿನಲ್ಲಿ ಚಿಂತನೆಗಳನ್ನು ನಡೆಸಿ ಪ್ರಯೋಗಶೀಲ ರಾಗುತ್ತಿದೆ. ನಾಯಕ ನಾಯಕಿರೂ ಕೂಡಾ ತಮ್ಮ ಇಮೇಜ್‌ನಿಂದ ಹೊರಬಂದು ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಈ ರೀತಿಯ ಪ್ರಯತ್ನಗಳನ್ನು ಪ್ರೊತ್ಸಾಹಿಸುವುದರ ಮೂಲಕ ಕನ್ನಡದ ಚಿತ್ರರಂಗದಲ್ಲಿ ಹೊಸತನ ವನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಮಾತನಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿವರ್ಷ ಈ ರೀತಿಯ ಚಿತ್ರೋತ್ಸವಗಳನ್ನು ಸಂಘಟನಾತ್ಮಕವಾಗಿ ಆಯೋಜಿಸುತ್ತಿದ್ದು, ಭವಿಷ್ಯದ ಪೀಳಿಗೆಯಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಚಿತ್ರಗಳನ್ನು ವೀಕ್ಷಿಸಿ ಬೆಂಬಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಾರ್ತಾ ಸಹಾಯಕ ಆರ್. ಮಾರುತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ಷಡಕ್ಷರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ. ಎಸ್. ಮಚ್ಚಾಧೋ, ಹೆಚ್‌ಪಿಸಿ ಚಿತ್ರಮಂದಿರದ ಪ್ರಬಂಧಕ ಜಯಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಗೀತಾ, ಆರ್.ಮೋಹನ್‌ಕುಮಾರ್, ಮುದ್ದಪ್ಪ ಮೊದಲಾದವರಿದ್ದರು.