ಎಂ.ಬಿ.ಪಾಟೀಲರತ್ತ ಹೈಕಮಾಂಡ್ ಚಿತ್ತ

ಕೆಪಿಸಿಸಿ ಅಧ್ಯಕ್ಷ ಗಾದಿಗೆ ನೂತನ ಸಾರಥಿ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕಾಂಗ್ರೆಸ್ ಹೈಕಮಾಂಡ್ ಉತ್ತರ ಕಂಡುಕೊಂಡಂತ್ತಿದ್ದು, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರತ್ತ ಹೈಕಮಾಂಡ್ ಚಿತ್ತ ಹರಿಸಿದೆ.
ಇದಕ್ಕೂ ಮೊದಲು ಕೆಪಿಸಿಸಿ ಸಾರಥ್ಯಕ್ಕೆ ಪ್ರಬಲ ಆಕಾಂಕ್ಷಿಯಾದ್ದವರು ಡಿ.ಕೆ. ಶಿವಕುಮಾರ್. ಆದರೆ ಅವರ ಆಯ್ಕೆ ಕುರಿತು ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ವಿರೋಧಿಸುತ್ತಿರುವುದು ಹಿನ್ನೆಡೆಗೆ ಕಾರಣವಾಗಿದೆ.
ಉಳಿದಂತೆ ಲಿಂಗಾಯಿತರನ್ನು ಓಲೈಸುತ್ತಿರುವ ಬಿಜೆಪಿಗೆ ತಕ್ಕ ಪ್ರತಿತಂತ್ರ ರೂಪಿಸಲು ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್, ಲಿಂಗಾಯ್ತ ಸಮುದಾಯಕ್ಕೆ ಸೇರಿದವರನ್ನು ಕೆಪಿಸಿಸಿ ಅಧ್ಯಕ್ಷ ಗಾದಿಗೆ ತರುವ ನಿಟ್ಟಿನಲ್ಲಿ ಹೆಚ್ಚು ಉತ್ಸುಕವಾಗಿದೆ.
ಈ ನಿಟ್ಟಿನಲ್ಲಿ ಲಿಂಗಾಯ್ತ ಸಮುದಾಯಕ್ಕೆ ಸೇರಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರಿಗೆ ಪಟ್ಟ ಕಟ್ಟುವ ನಿಟ್ಟಿನಲ್ಲಿ ಕಳೆದ ಒಂದು ವಾರದಲ್ಲಿ ಎರಡು ಬಾರಿ ಮಾತುಕತೆ ನಡೆಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಸಚಿವ ಸ್ಥಾನ ಬಿಟ್ಟು ಕೆಪಿಸಿಸಿ ಅಧ್ಯಕ್ಷರಾಗಿ, ಪಕ್ಷ ಸಂಘಟನೆಯತ್ತ ಗಮನಹರಿಸಿ ಎಂಬ ಷರತ್ತು ವಿಧಿಸಿದ್ದಾರೆ.
ಆದರೆ ಸಚಿವ ಸ್ಥಾನ ಬಿಟ್ಟುಕೊಡಲು ಪಾಟೀಲ್ ಮೀನಾ -ಮೇಷ ಎಣಿಸಿದ್ದರಿಂದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಸರಿದಿದೆ ಎನ್ನಲಾಗಿದೆ.
ವೀರೇಂದ್ರ ಪಾಟೀಲ್ ಹಾಗೂ ಎಸ್.ಎಂ.ಕೃಷ್ಣ ಅಧ್ಯಕ್ಷರಾಗಿದ್ದುಕೊಂಡೇ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದರು. ಜಿ.ಪರಮೇಶ್ವರ್ ಕೂಡಾ ಸಚಿವರಾಗಿದ್ದುಕೊಂಡೇ ಅಧ್ಯಕ್ಷ ಸ್ಥಾನ ನಿರ್ವಹಿಸುತ್ತಿದ್ದಾರೆ.
ಹೀಗಾಗಿ ಒಂದು ವರ್ಷದ ಮಟ್ಟಿಗೆ ಎಂ.ಬಿ. ಪಾಟೀಲರಿಗೆ ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವರಾಗಿರಲು ಅವಕಾಶ ಕಲ್ಪಿಸ ಬೇಕೆಂದು ಮಲ್ಲಿಕಾ ರ್ಜುನ ಖರ್ಗೆ ಹೈ ಕಮಾಂಡ್‌ಗೆ ಮನವಿ ಮಾಡಿದ್ದಾರೆನ್ನಲಾಗಿದೆ. ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಈ ಬಗ್ಗೆ ಪುನರ್ ಪರಿಶೀಲಿ ಸಬಹು ದೆಂಬುದು ಖರ್ಗೆ ಅವರ ಅಭಿಪ್ರಾಯ ವಾಗಿದೆ.
ಅಲ್ಲದೆ ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಉತ್ತರ ಕರ್ನಾಟಕದ ಅದರಲ್ಲೂ ಲಿಂಗಾಯ್ತ ಸಮುದಾಯಕ್ಕೆ ಸೇರಿದವರನ್ನು ಅಧ್ಯಕ್ಷರನ್ನಾಗಿಸಬೇಕೆಂಬುದು ಮುಖ್ಯಮಂತ್ರಿ ಹಾಗೂ ಖರ್ಗೆ ಅವರ ಒತ್ತಾಯವಾಗಿದೆ. ತಾವು ಹೇಳಿದವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಪ್ರಾಮಾಣಿಕ ಕಾರ್ಯ ನಿರ್ವ ಹಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಹುಲ್‌ಗಾಂಧಿ ಅವರಲ್ಲಿ ಮನವಿ ಮಾಡಿದ್ದಾರೆನ್ನಲಾಗಿದೆ.
ಆದರೆ ಮೇ ೮ ರಂದು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದ ತಂಡವು ರಾಜ್ಯಕ್ಕೆ ಆಗಮಿಸುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಗಾದಿಗೆ ಆಯ್ಕೆ ಸಂಬಂಧ ಹಲವು ಸುತ್ತಿನ ಸಭೆ ನಡೆಸಲಿದೆ.
ಅಂತಿಮವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಸಾಧ್ಯತೆ ಇದ್ದು, ಎಂ.ಬಿ. ಪಾಟೀಲರು ಯುವಕರಾಗಿರುವುದು ರಾಹುಲ್‌ಗಾಂಧಿಯವರ ಆಸಕ್ತಿಗೆ ಕಾರಣವಾಗಿದೆ.
ಹೀಗಾಗಿ ಎಲ್ಲವೂ ಅಂದುಕೊಂಡಂತೆ ನಡೆದರೆ ಎಂ.ಬಿ.ಪಾಟೀಲರು ಕೆಪಿಸಿಸಿ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಬಹುದಾಗಿದೆ.