ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರೇ ಚುನಾಯಿತರಾಗಲಿ: ನೈರುತ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ನರೇಶ್ಚಂದ್ ಹೆಗ್ದೆ ಹೇಳಿಕೆ


ಶಿವಮೊಗ್ಗ: ಪದವೀಧರರು ಅಥವಾ ಶಿಕ್ಷಕರ ಕ್ಷೇತ್ರಕ್ಕೆ ಆಯಾ ಕ್ಷೇತ್ರಗಳಲ್ಲಿದ್ದವರು ಅಥವಾ ಅಲ್ಲಿ ಸೇವೆ ಸಲ್ಲಿಸಿ ಅನುಭವ ಇದ್ದವರೇ ಆಯ್ಕೆಯಾದರೆ ಎರಡು ಕ್ಷೇತ್ರದ ಜನರ ಕಷ್ಟ, ನಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ನನಗೆ ಮತದಾರರು ಬೆಂಬಲಿಸಿದರೆ, ಅವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಿದ್ದೇನೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಂಗಳೂರಿನ ಕೆ.ಎಸ್.ಹೆಗ್ಡೆ ಅಸ್ಪತ್ರೆಯ ವೈದ್ಯ ಡಾ.ನರೇಶ್ಚಂದ್ ಹೆಗ್ದೆ ತಿಳಿಸಿದರು.

ಮಂಗಳವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,  ನಾನೊಬ್ಬ ಶಿಕ್ಷಕ.  ವೈದಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಮೆಡಿಕಲ್‌ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ನನ್ನ ವೃತ್ತಿ. ಆ ವೃತ್ತಿಯ ಬಗ್ಗೆ ಆಳವಾದ ಆಧ್ಯಯನ ಮಾಡಿದವನು ನಾನು. ಹಾಗಾಗಿ ಆ ಕ್ಷೇತ್ರದಲ್ಲಿ ಸೇವೆ ಸಲ್ಲಿವುದಕ್ಕೆ ಹೆಚ್ಚು ಅರ್ಹತೆ ನನಗಿದೆ ಎಂದು ತಮ್ಮ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು.

ಶಿಕ್ಷಕರ ಕ್ಷೇತ್ರದಲ್ಲಿ ಈ ಹಿಂದೆ ರಾಜಕಾರಣಿಗಳು, ಶಿಕ್ಷಕರೇ ಅಲ್ಲದವರು, ಕೆಲವೊಂದು ಸಂದರ್ಭದಲ್ಲಿ ಪದವೀಧರರು ಅಲ್ಲದೇ ಇರುವವರು ಸ್ಪರ್ಧಿಸಿ ಚುನಾಯಿತರಾಗಿದ್ದು ವಿಪರ್ಯಾಸ.ಈ ಕಥೆ ಇಲ್ಲಿಗೆ ಮುಗಿಯಬೇಕು, ಎರಡು ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರರು ಇದ್ದಾರೆ. ಅವರು ತಮಗೆ ಎಂತಹ ಪ್ರತಿನಿಧಿ ಬೇಕೆನ್ನುವುದನ್ನು ಒಮ್ಮೆ ಆಳವಾಗಿ ಆಲೋಚಿಸಬೇಕಿದೆ. ಒಮ್ಮೆ ಆಯ್ಕೆ ಮಾಡಿಕೊಂಡು ಐದು ವರ್ಷ ಪಶ್ಚತಾಪ ಪಡುವುದಕ್ಕಿಂತ ಒಮ್ಮೆ ಆಲೋಚಿಸಿ ಮತ ಹಾಕುವುದು ಸೂಕ್ತ ಎಂದು ಮನವಿ ಮಾಡಿದರು.
ಶಿಕ್ಷಕರ ಕ್ಷೇತ್ರದಲ್ಲಿ ೨೩ ಸಾವಿರದಷ್ಟು ಮತದಾರರಿದ್ದಾರೆ. ಶಿಕ್ಷಕರು ಪ್ರತಿನಿಧಿಸುವ ಈ ಕ್ಷೇತ್ರಕ್ಕೆ ಸ್ಪರ್ಧಿಸಿ, ಗೆಲುವು ಸಾಧಿಸಿ ಬರಬೇಕು. ನಾನು ಗೆಲ್ಲುವ ವಿಶ್ವಾಸವಿದೆ. ಹಣ, ಹೆಂಡದ ಅಮಿಷಕ್ಕೆ ಯಾರೂ ಒಳಗಾಗಬಾರದು. ಈ ಕ್ಷೇತ್ರದಲ್ಲಿ ಮಾತ್ರವಲ್ಲ, ಯಾವುದೇ ಕ್ಷೇತ್ರದ ಚುನಾವಣೆಯಲ್ಲಿಯೂ ಇದಕ್ಕೆ ಬಲಿಯಾಗಬಾರದು .
ನೈರುತ್ಯ ಶಿಕ್ಷಕರ ಕ್ಷೇತ್ರ ಎನ್ನುವಂತಹದ್ದು ಅತ್ಯಂತ ಸುಶಿಕ್ಷತ ಮತದಾರರ ಕ್ಷೇತ್ರವೆನಿಸಿದೆ. ಇಲ್ಲಿನ ಮತದಾರರು ಕನಿಷ್ಠ ಎರೆಡೆರಡು ಪದವಿಗಳನ್ನು ಪಡೆದವರು ಎಂಬುದು ಉಲ್ಲೇಖನೀಯ ಎಂದರು.

ಸುಶಿಕ್ಷಿತರ, ಮೇಧಾವಿಗಳ ಮತ್ತು ಬುದ್ದಿವಂತರ ಈ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಓರ್ವ ವಿದ್ಯಾವಂತ ಮತ್ತು ಸ್ವತಃ ಶಿಕ್ಷಕನೇ ಆಗಿರುವ ಅಭ್ಯರ್ಥಿಯೇ ಬೇಕು ಎಂಬ ಪರಿಕಲ್ಪನೆಯಡಿ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಮತ್ತು ಮೆಡಿಕಲ್  ಕಾಲೇಜಿನಲ್ಲಿ ಪ್ರೊಫೆಸರ್‍ ಆಗಿರುವ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಿದ್ದೇನೆ.ಇದು ನನ್ನ ಸ್ವಾರ್ಥ ಎನ್ನುವುದಕ್ಕಿಂತ ಈ ಕ್ಷೇತ್ರದ ಘನತೆ , ಗೌರವ ಉಳಿಯಬೇಕು. ಹಾಗೆಯೇ ಆ ಕ್ಷೇತ್ರಕ್ಕೂ ಒಂದಷ್ಟು ಗೌರವ ಬರಬೇಕೆನ್ನುವುದು ಆಗಿದೆ . ಇದಕ್ಕೆ ಮತದಾರರು ಸ್ಪಂದಿಸಬೇಕಿದೆ ಎಂದು ಅವರತ ತಮ್ಮ ಮನದಾಳ ಮಾತು ಹಂಚಿಕೊಂಡರು.

ಪ್ರಾಥಮಿಕ ಶಾಲಾ ಹಂತದಿಂದ ವೃತ್ತಿ ಶಿಕ್ಷಣ ಕಾಲೇಜುಗಳವರೆಗಿನ ವಿವಿಧ ಹಂತಗಳ ಶೈಕ್ಷಣಿಕ ಸಂಸ್ಥೆಗಳ, ಭಾಷಾ ಮಾಧ್ಯಮದ, ಬೋಧಕ ವೃಂದದ, ಬೋಧಕೇತರರ, ಸರಕಾರಿ ಅನುದಾನಿತ ಮತ್ತು ಅನುದಾನರಹಿತ ವಿದ್ಯಾಸಂಸ್ಥೆಗಳವರ, ಆಡಳಿತ ಮಂಡಳಿಗಳವರ ಬಹುಮುಖಿ ಸಮಸ್ಯೆಗಳನ್ನು ಆಯಾ ವರ್ಗದಲ್ಲಿ ತಜ್ಷರೆನಿಸಿದವರಿಂದ ಸಲಹೆ, ಮಾರ್ಗದರ್ಶನ ಪಡೆದು ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಲು ಕಾರ್ಯೋನ್ಮುಖವಾಗುವ ಬದ್ದತೆ ಖಂಡಿತವಾಗಿಯೂ ನನಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಡಾ.ಅಮಿತಾ ಹೆಗ್ಡೆ, ಜಿಲ್ಲಾ ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಶಶಿ ಉಪಸ್ಥಿತರಿದ್ದರು.

ನನ್ನ ತಂದೆ ಸರಕಾರಿ ವೈದ್ಯಾಧಿಕಾರಿಗಳಾಗಿ ಉಡುಪಿ ಜಿಲ್ಲೆಯಾದ್ಯಂತ ಚಿರಪರಿಚಿತರು, ತಾಯಿ ಗೃಹಿಣಿಯಾಗಿ ಮಹಿಳಾಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು. ನಾನು ಬಹುಬೇಡಿಕೆಯ ಬಿಎಸ್ಸಿ ಮತ್ತು ಎಂಎಸ್ಸಿ ಕೋರ್ಸ್‌‌ಗಳಿಗೆ ಸಂಪೂರ್ಣ ಪಠ್ಯಕ್ರಮ ಮತ್ತು ಶಿಷ್ಟಾಚಾರ ನಿಯಮಗಳನ್ನು ರಚಿಸುವ ಮೂಲಕ ಉನ್ನತ ಶಿಕ್ಷಣದ ಪಠ್ಯ ರಚನಾ ಕ್ಷೇತ್ರದಲ್ಲೂ ಕೆಲಸ ಮಾಡಿದ್ದೇನೆ. ಸಾಕಷ್ಟು ರೋಗಿಗಳಿಗೆ ಉಚಿತ ಹೃದ್ರೋಗ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡಿರುತ್ತೇನೆ. ಈ ಅನುಭವವೇ ನನ್ನ ಸ್ಪರ್ಧೆಗೆ ಕಾರಣ. ಇದಕ್ಕೆ ಮತದಾರರು ಸ್ಪಂದನೆ ಸಿಕ್ಕರೆ, ಒಳ್ಳೆಯ ಕೆಲಸ ಮಾಡಿ ತೋರಿಸುವ ಹಂಬಲ ನನ್ನದು.
–  ಡಾ. ನರೇಶ್ಚಂದ್ ಹೆಗ್ದೆ, ನೈರುತ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ