ಚನ್ನಮ್ಮ ಸಾಧನೆ ಯುವ ಪೀಳಿಗೆಗೆ ಪ್ರೇರಕ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್

ಶಿವಮೊಗ್ಗ: ಕಿತ್ತೂರು ರಾಣಿ ಚನ್ನಮ್ಮರಂತಹ ನಾಡಿನ ಸ್ತ್ರೀ ರತ್ನಗಳಿಗೆ ಜಾತಿ ಬಣ್ಣ ಕಟ್ಟುವುದು ಸರಿಯಲ್ಲ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಹೇಳಿದರು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಅಖಿಲ ಭಾರತ ವೀರಶೈವ ಮಹಾಸಭಾ, ಪಂಚಮಸಾಲಿ ಸಮಾ ಜದ ವತಿಯಿಂದ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಿತ್ತೂರುರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿ ಗಳಾಗಿ ಪಾಲ್ಗೊಂಡು ಮಾತನಾಡಿದರು.
ರಾಣಿ ಚನ್ನಮ್ಮ ಯಾವುದೇ ಸಮಾಜಕ್ಕಾಗಿ, ಸಮಾಜದ ಹೆಸರಿನಲ್ಲಿ ಹೋರಾಟ ಮಾಡಿದವಳಲ್ಲ. ಬ್ರಿಟೀಷರ ವಿರುದ್ಧ ಹೋರಾಡಿದ ವೀರ ಮಹಿಳೆ, ಆದ್ದರಿಂದ ಇಂತಹ ಸ್ತ್ರೀರತ್ನಕ್ಕೆ ಜಾತಿ ಬಣ್ಣ ಕಟ್ಟದೆ ನಾಡಿನ ವೀರ ವನಿತೆಯಾಗಿ ನೋಡಬೇಕು. ಆಕೆಯ ಮಾರ್ಗದಲ್ಲಿ ಸಾಗಬೇಕು ಎಂದು ಕರೆ ನೀಡಿದರು.
ಇಂದು ಅನೇಕರ ಬಾಯಿ ಮಾತಿಗೆ ನಾವೆಲ್ಲ ಒಂದು ಎನ್ನುತ್ತಾರೆ, ಆದರೆ ಮನಸ್ಸಿನಲ್ಲಿ ಜಾತಿ, ಉಪಜಾತಿಯ ಚಿಂತನೆ ಇರುತ್ತದೆ. ರಾಣಿ ಚನ್ನಮ್ಮ ಸಹ ಲಿಂಗಾಯತ ಸಮಾಜದ ಪಂಚಮಸಾಲಿ ಉಪಪಂಗಡಕ್ಕೆ ಸೀಮಿತಳಾಗಬಾರದು ಎಂದರು.
ರಾಣಿ ಚನ್ನಮ್ಮ ಆಗಲು ಬೇರೆ ಯಾರಿಂದಲೂ ಸಾಧ್ಯವಾಗಲ್ಲ, ಆಕೆ ನಿರಂತರ ಚೈತನ್ಯ, ಆಕೆಯ ಪರಂ ಪರೆ ಸಾಗಿದ ಹೆಜ್ಜೆ ಗುರುತು ನಮ್ಮೆಲ್ಲ ರಿಗೂ ಆದರ್ಶವಾಗ ಬೇಕೆಂದರು.
ರಾಣಿ ಚನ್ನಮ್ಮನ ಮನೆತನದವರು ಸರದಾರ ಮನೆತನದವರಾಗಿ ಇಂದಿಗೂ ಇದ್ದಾರೆ. ಚೆನ್ನಮ್ಮ ಕಾಲದ ವಸ್ತುಗಳನ್ನು ಸಂಗ್ರಹಿಸಿರುವ ಮ್ಯೂಸಿಯಂ ಸಹ ಇದ್ದು ಗತ ಕಾಲದ ಅಂದಿನ ಹೋರಾಟದ ದಿನಗಳನ್ನು ನೆನಪಿಸುತ್ತದೆ ಎಂದ ಅವರು, ಇಂತಹ ವೀರ ರಾಣಿಯ ಜಯಂತಿಯನ್ನು ಸಿದ್ದರಾಮಯ್ಯ ಸರ್ಕಾರ ನಾಡಿನಾದ್ಯಂತ ಆಚರಿಸಲು ಆದೇಶಿಸಿರುವುದು ಉತ್ತಮ ಕೆಲಸ ಎಂದು ಪ್ರಶಂಶಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ, ವೀರಶೈವ ಸಮಾಜದ ಅಧ್ಯಕ್ಷ ಎನ್.ಜೆ. ರಾಜಶೇಖರ್, ರುದ್ರಮುನಿ ಸಜ್ಜನ್, ಹೆಚ್.ವಿ. ಮಹೇಶ್ವರಪ್ಪ, ಉಪಮೇಯರ್ ರೂಪಲಕ್ಷ್ಮಣ್, ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೀಶ್, ಅರ್ಚನಾ ಬಳ್ಳೇಕೆರೆ, ರೇಣುಕಾ ನಾಗರಾಜ್, ಸುನೀತಾ ಅಣ್ಣಪ್ಪ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ್ ಮತ್ತಿತರರಿದ್ದರು.