ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಶಿವಮೊಗ್ಗದ ಚಂದ್ರಶೇಖರ್ ಅವರು ಆತ್ಮಹತ್ಯೆಗೆ ಸಚಿವರ ಕಿರುಕುಳವೇ ಕಾರಣ ಎನ್ನುವುದು ಡೆತ್ ನೋಟ್ ನಲ್ಲಿ ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ನಾಗೇಂದ್ರ ಅವರನ್ನು ತಕ್ಷಣವೇ ಸಂಪುಟದಿಂದ ಕೈಬಿಡಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ಜೆಡಿಎಸ್ ನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರದ ಕಾರ್ಯವೈಖರಿಯು ಭಯ ತರಿಸುವಂತಿದೆ. ಶಿವಮೊಗ್ಗದವರೇ ಅದ ಚಂದ್ರಶೇಖರ್ ಅವರ ಸಾವು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಅವರು ಡೆತ್ ನೋಟಿನಲ್ಲಿ ನಾನು ಹೇಡಿಯಲ್ಲ ಎಂದು ಮೂರು ಸಾರಿ ಬರೆದಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಂದರ್ಭ ಅವರಿಗೆ ಯಾಕೆ ಬಂತು ಎಂಬುದನ್ನು ನಾವು ಯೋಚಿಸಬೇಕಾಗಿದೆ. ಒಬ್ಬ ಅಧಿಕಾರಿಗೆ ಈ ಪರಿಸ್ಥಿತಿ ಬಂದಿದ್ದರೆ ಸಾಮಾನ್ಯರ ಪಾಡೇನು ಎಂದು ಅವರು ಪ್ರಶ್ನಿಸಿದರು.
ನಿಗಮದಲ್ಲಿ ಕೋಟ್ಯಂತರ ರೂ. ವ್ಯವಹಾರವನ್ನು ಮೌಖಿಕ ಅದೇಶ ಕೊಟ್ಟ ಕಾರಣವೇ ಈ ದುರ್ಘಟನೆಗೆ ಸಂಭವಿಸಿದೆ. ಜೀವಂತ ಇದ್ದಾಗ ಯಾರಿಗೂ ಹೇಳಿಕೊಳ್ಳಲಾಗದ ತೋಳಲಾಟದ ಪರಿಸ್ಥಿತಿ ಒಬ್ಬ ಅಧಿಕಾರಿಗೆ ಬರುತ್ತದೆ ಎಂಬುದನ್ನು ನಾಗರೀಕ ಸಮಾಜ ಗಂಭೀರವಾಗಿ ತೆಗೆದುಕೊಳ್ಳಬೇಕು. ಸರಕಾರವು ಕೂಡ ಈ ಘಟನೆ ನಂತರ ಏನೂ ನಡೆದೇ ಇಲ್ಲವೇನೋ ಎಂಬ ರೀತಿಯಲ್ಲಿ ವರ್ತಿಸುತ್ತಿದೆ. ಇಂತಹ ಘಟನೆಗಳಿಂದ ಸಂಬಂಧಿಸಿದ ಕುಟುಂಬಗಳು ಅನಾಥವಾಗುತ್ತವೆ. ಇದನ್ನು ಖಂಡಿಸುತ್ತೇವೆ ಎಂದರು.
ಯಾರೂ ಅಧಿಕಾರ ಇದ್ದಾಗ ಒಂದು, ಇಲ್ಲದಾಗ ಒಂದು ಮಾಡಬಾರದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರು ಮನೆಗೆ ವಾಪಾಸ್ ಆಗುವ ಖಾತರಿ ಇಲ್ಲವಾಗಿದೆ. ಬೇರೆ ರಾಜ್ಯದಿಂದ ಬರುವವರು ಇಲ್ಲಿ ರೇವ್ ಪಾರ್ಟಿ ಮಾಡುತ್ತ ಅನಾಹುತಗಳಿಗೆ ಕಾರಣರಾಗುತಿದ್ದಾರೆ. ಉಡುಪಿಯಂತಹ ಕಡೆ ಗ್ಯಾಂಗ್ ವಾರ್ ಗಳು ನಡೆಯುತ್ತಿವೆ, ಶಿವಮೊಗ್ಗದಂತಹ ನಗರಗಳಲ್ಲಿ ೧೦ ನಿಮಿಷದಲ್ಲಿ ೩ ಕೊಲೆಗಳು ಸಂಭವಿಸುತ್ತವೆ. ಈ ಸಂಬಂಧ ಅಧಿಕಾರಿಗಳು ಕಾರ್ಯನಿರ್ವಹಿಸಲು ಬಿಡುತ್ತಿಲ್ಲ. ಎಲ್ಲಿ ನೋಡಿದರೂ ಗಾಂಜಾ, ಇಸ್ಪೀಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂದುದೂರಿದರು.
ಚಂದ್ರಶೇಖರ್ ಅವರು ತಮ್ಮ ಡೆತ್ ನೋಟಿನಲ್ಲಿ ತಮ್ಮ ಸಾವಿಗೆ ಇಲಾಖೆಯ ಸಚಿವರು ಎಂದು ಹೇಳಿದ ದಾಖಲೆಯಿದೆ. ಎಫ್ ಐಆರ್ ನಲ್ಲಿ ಸಚಿವರ ಹೆಸರನ್ನು ಸೇರಿಸಲ್ಪಟ್ಟಿಲ್ಲ. ಇದು ಯಾವುದೇ ಅಧಿಕಾರಿ ಧೈರ್ಯದಿಂದ ಕೆಲಸ ಮಾಡುವ ವಾತಾವರಣ ಇಲ್ಲದಿರುವುದನ್ನು ಸೂಚಿಸುತ್ತದೆ. ಒಬ್ಬ ಸೂಪರಿಡೆಂಟ್ ಅವರನ್ನು ನಿಗಮದ ಹಣಕಾಸು ವ್ಯವಹಾರದಲ್ಲಿ ಆರ್‍ಟಿಜಿಎಸ್ ಗೆ ಒತ್ತಾಯಿಸಿದ ಸಂಬಂಧ ಬ್ಯಾಂಕ್ ಮ್ಯಾನೇಜರ್ ಅವರನ್ನು ಎಫ್ ಆರ್ ಐ ನಲ್ಲಿ ಸೇರಿಸಲಾಗಿದೆ. ಒಬ್ಬ ಅಧಿಕಾರಿ ಧೈರ್ಯವಾಗಿ ಮುನ್ನುಗಿ ಕೆಲಸ ನಿರ್ವಹಿಸದೆ ಮೌನವಾಗಿದ್ದರೂ ನಾಗರಿಕ ಸಮಾಜಕ್ಕೆ ನಷ್ಟ, ಆತ್ಮಹತ್ಯೆ ಮಾಡಿಕೊಂಡರೂ ನಾಗರಿಕ ಸಮಾಜಕ್ಕೆ ನಷ್ಟ ಎಂದು ವ್ಯಂಗ್ಯವಾಡಿದರು.
ಈ ಕುರಿತು ಸರಕಾರದ ಮುಂದಿನ ನಡೆ ನೋಡಿ ಹೋರಾಟವನ್ನು ಉಗ್ರ ಹೋರಾಟವನ್ನು ರೂಪಿಸುತ್ತೇವೆ. ೧೮೭ ಕೋಟಿ ವ್ಯವಹಾರದ ಈ ಪ್ರಕರಣದಲ್ಲಿ ಮಂತ್ರಿಗಳೇ ನೇರ ಹೊಣೆ. ಅವರ ರಾಜೀನಾಮೆಗೆ ಒತ್ತಾಯಿಸುತ್ತೇವೆ. ಈ ಕುರಿತು ಸರಿಯಾದ ತನಿಖೆ ನಡೆಸಬೇಕು. ಸಂತ್ರಸ್ತ ಕುಟುಂಬಕ್ಕೆ ಪರಿಹಾರವನ್ನು ಕೊಡಬೇಕು ಮತ್ತು ನ್ಯಾಯ ಒದಗಿಸಬೇಕು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್, ಜಿಲ್ಲಾ ಕಾರ್ಯದರ್ಶಿ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಜಿಲ್ಲಾ ಕಾರ್ಯದರ್ಶಿ ಸಂಗಯ್ಯ, ಪಕ್ಷದ ನಾಯಕರಾದ ದೀಪಕ್ ಸಿಂಗ್, ರಮೇಶ್ ನಾಯಕ್, ಮಂಜುನಾಥ್, ವೆಂಕಟೇಶ್, ರಘುಬಾಲರಾಜ್, ಸುನೀಲ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.
…………………………………
ಈ ಹಿಂದೆ ಈಶ್ವರಪ್ಪನವರ ಮೇಲೆ ಗುತ್ತಿಗೆದಾರರೊಬ್ಬರು ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಾಗ ಆಗ ಸಿದ್ದರಾಮಯ್ಯ ಸೇರಿದಂತೆ ಹಲವರು ಇವರ ರಾಜೀನಾಮೆಗೆ ಒತ್ತಾಯಿಸಿದ್ದರು. ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೊಂದು ನ್ಯಾಯವೇ? ಡೆತ್ ನೋಟ್ ಗೆ ಬೆಲೆಯಿಲ್ಲವೇ? ವಾಲ್ಮೀಕಿ ಅಭಿವೃದ್ಧಿ ನಿಗಮದ ಜವಾಬ್ದಾರಿ ಹೊತ್ತ ಇಲಾಖೆಯ ಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಘಟನೆ ಸಂಬಂಧ ನ್ಯಾಯ ಸಿಗುವುದಿಲ್ಲ.
– ಕೆ.ಬಿ. ಪ್ರಸನ್ನ ಕುಮಾರ್, ಮಾಜಿ ಶಾಸಕ