ಶಿವಮೊಗ್ಗ : ಜಾತಿ ಬೇಧ ಮರೆತು ಸಂಘಟಿತ ಸಮಾಜ ನಿರ್ಮಾಣ ಕಾರ್ಯದಲ್ಲಿ ಬಸವಣ್ಣನವ ರೊಂದಿಗೆ ಶ್ರಮಿಸಿದ ಮಹನೀಯ ಹಡಪದ ಅಪ್ಪಣ್ಣ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.
ಹಡಪದ ಅಪ್ಪಣ್ಣ ಅವರು ರಚಿಸಿದ ಕೃತಿಗಳಿಂದ ಅವರ ಉದಾತ್ತ ಚಿಂತನೆಗಳು ಹಾಗೂ ಅವರ ವ್ಯಕ್ತಿ ತ್ವವನ್ನು ಅರ್ಥೈಸಿಕೊಳ್ಳಬಹುದಾಗಿದೆ ಎಂದ ಅವರು, ಬಸವಣ್ಣನವರಂತಹ ಮಹಾನ್ ಮಾನವತಾವಾದಿಗಳು ಹಡಪದ ಅಪ್ಪಣ್ಣನವರ ಸಲಹೆ- ಮಾರ್ಗದರ್ಶನಗಳನ್ನು ಪಡೆಯುತ್ತಿ ದ್ದರು ಎಂಬುದು ವಿಶೇಷ. ಇದ ರಿಂದಾಗಿ ಹಡಪದ ಅಪ್ಪಣ್ಣನವರ ವೈಚಾರಿಕ ನಿಲುವನ್ನು ತಿಳಿಯ ಬಹುದಾಗಿದೆ ಎಂದರು.
ಜಾತೀಯತೆಯೇ ವಿಜೃಂಭಿಸು ತ್ತಿರುವ ಈ ಕಾಲಘಟ್ಟದಲ್ಲಿ ಗುಣ ಶ್ರೀಮಂತಿಕೆ ಹೊಂದಿದ್ದ ಹಡಪದ ಅಪ್ಪಣ್ಣನವರ ಚಿಂತನೆ ಬರಹಗಳು ಇಂದಿಗೂ ಪ್ರಸ್ತುತವಾದುವುಗಳು. ರಾಜಕಾರಣಿಗಳು, ಮಠಾಧೀಶರಲ್ಲಿ ಅಧಿಕಾರ, ಧನದಾಹ ಇಂದು ಮೇರೆ ಮೀರಿದೆ. ಜಾತಿ ವ್ಯವಸ್ಥೆ ಅಳಿಯದೇ ಸಮುದಾಯದ ವಿಕಾಸ ಸಾದ್ಯವಿಲ್ಲ ಎಂದು ಶರಣರು ಅಂದೇ ನಂಬಿದ್ದರು ಎಂದ ಅವರು, ನಾಡಿನ ಜನತೆಗೆ ಸಾರಿದ ಸಮಾನತೆಯ ಸಂದೇಶ ಸಾರ್ವಕಾಲಿಕವಾದುದು ಎಂದವರು ನುಡಿದರು.