ಶಿವಮೊಗ್ಗ: ಚುನಾವಣಾ ಪ್ರಚಾರ ಆರಂಭಕ್ಕೂ ಮುನ್ನಾ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಇಂದು ನಗರದ ಪ್ರಮುಖ ಮಠ ಮತ್ತು ಆಶ್ರಮಗಳಿಗೆ ಭೇಟಿ ನೀಡಿ ಸ್ವಾಮೀಜಿ ಗಳಿಂದ ಆಶೀರ್ವಾದ ಪಡೆದರು.
ಈಶ್ವರಪ್ಪನವರು ಪಕ್ಷದ ಪ್ರಮುಖ ರೊಂದಿಗೆ ಇಂದು ಬೆಳಿಗ್ಗೆ ೭.೪೫ಕ್ಕೆ ವೆಂಕಟೇಶನಗರದ ಬಸವಕೇಂದ್ರಕ್ಕೆ ಭೇಟಿ ನೀಡಿ, ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳ ಆಶೀರ್ವಾದ ಪಡೆದು ಕೆಲ ಕಾಲ ಚರ್ಚೆ ನಡೆಸಿದರು.
ನಂತರ ಕಲ್ಲಗಂಗೂರಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಭೇಟಿ ನೀಡಿದ ಈಶ್ವರಪ್ಪನವರು ಆಶ್ರಮದ ಅಧ್ಯಕ್ಷರಾದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಯವರಿಂದ ಆಶೀರ್ವಾದ ಪಡೆದರು.
ತದನಂತರ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ ಅವರು, ಶ್ರೀ ಪ್ರಸನ್ನನಾಥ ಸ್ವಾಮೀಜಿಯವರಿಂದ ಆಶೀ ರ್ವಾದ ಪಡೆದರಲ್ಲದೆ, ಅವರೊಂದಿಗೂ ಸಹ ಮಾತುಕತೆ ನಡೆಸಿದರು.
ನಂತರ ಅಂತಿಮವಾಗಿ ಬೆಕ್ಕಿನ ಕಲ್ಮಠಕ್ಕೆ ಭೇಟಿ ನೀಡಿ, ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದು ಫಲ ತಾಂಬೂಲ ಸ್ವೀಕರಿಸಿದರು.
ಈ ನಾಲ್ಕೂ ಸ್ಥಳಗಳ ಭೇಟಿ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಚನ್ನಬಸಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎನ್.ಜೆ. ರಾಜಶೇಖರ್ ಹಾಗೂ ಜಿ.ಪಂ. ಸದಸ್ಯ ಕೆ.ಈ. ಕಾಂತೇಶ್ ಇವರುಗಳು ಸಾತ್ ನೀಡಿದರು.
ಎಲ್ಲಾ ಮಠಾಧೀಶರರೊಂದಿಗೂ ಕೆಲ ನಿಮಿಷಗಳ ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದ ಕೆ.ಎಸ್.ಈಶ್ವರಪ್ಪ, ಈ ಕೇಂದ್ರಗಳಿಂದ ಹೊರಬರುವಾಗ ಅತ್ಯಂತ ಹಸನ್ಮುಖರಾಗಿದ್ದುದು ಕಂಡುಬಂದಿತು.
ನಾಮಪತ್ರ ಸಲ್ಲಿಕೆಗೂ ಮೊದಲು ಮಠ,ಮಂದಿರಗಳಿಗೆ ಭೇಟಿ ನೀಡುವ ಮೂಲಕ ಕೆ.ಎಸ್.ಈಶ್ವರಪ್ಪ ಹೊಸ ರೀತಿಯ ಪ್ರಚಾರದ ಹಾದಿಯನ್ನು ಹಿಡಿದಿದ್ದು, ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಜಾತಿ, ಜನಾಂ ಗದ ಮತದಾರರನ್ನು ತನ್ನತ್ತ ಸೆಳೆಯು ವಂತಹ ಪ್ರಯತ್ನವನ್ನು ನಡೆಸಿದ್ದಾರೆ. ಅಲ್ಲದೆ, ಎಲ್ಲರ ಪ್ರೀತಿ, ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಏ.೧೯ರಂದು ತಮ್ಮ ಉಮೇದು ವಾರಿಕೆಯನ್ನುಸಲ್ಲಿಸಲಿರುವ ಈಶ್ವರಪ್ಪ, ಇದಕ್ಕೂ ಮೊದಲು ಮಠಗಳಿಗೆ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ.