ಲೇಖನ : ಸೌಮ್ಯ ಗಿರೀಶ್
ಶಿವಮೊಗ್ಗದ ಸಣ್ಣ ಊರಾದ ಶಂಕರಘಟ್ಟದಲ್ಲಿ ಸಾಧಾರಣ ಬಾಲಕನಾಗಿ ಬೆಳೆದ ಹುಡುಗ ಇಂದು ವಿಶ್ವಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿ ಕೊಂಡು ತನ್ನ ಕೀರ್ತಿ ಪತಾಕೆಯನ್ನು ಹಾರಿಸಿ ತನ್ನದೇ ಶೈಲಿಯಲ್ಲಿ ಛಾಪು ಮೂಡಿಸಿರುವ ವಿಶಿಷ್ಟ ಪ್ರತಿಭೆ ಕೀರ್ತಿ ಅಲಿಯಾಸ್ ಕೀರ್ತಿಕುಮಾರ್ ಅಲಿಯಾಸ್ ಕೀರ್ತಿ ಶಂಕರಘಟ್ಟ ಅಲಿಯಾಸ್ ಬಿಗ್‌ಬಾಸ್ ಕೀರ್ತಿ, ಎಲ್ಲಕ್ಕಿಂತಲೂ ಮಿಗಿಲಾಗಿ ಇವರ ಅನ್ವರ್ಥನಾಮ ‘ಕಿರಿಕ್ ಕೀರ್ತಿ’, ಇವರ ಸಾಧನೆಯ ಹಾದಿಯ ಒಂದು ಸಣ್ಣ ಸಿಂಹಾವಲೋಕನ ಇಂದಿನ ಈ ಅಂಕಣದಲ್ಲಿ.
ಸಂಕಷ್ಟದಲ್ಲೂ ಸವಿದಿನಗಳ ಬಾಲ್ಯ
ಹುಟ್ಟಿದ್ದು ಅಮ್ಮ ಲಲಿತಾರ ತವರೂರಾದ ಮಂಡಗದ್ದೆಯಲ್ಲಿ ಆದರೆ ಬೆಳೆದದ್ದು ಅಪ್ಪ ಉದಯಕುಮಾರ್‌ರ ಊರಾದ ಶಂಕರಘಟ್ಟದಲ್ಲಿ. ನಾಲ್ಕು ಜನರಿಗೆ ಅನ್ನವಿತ್ತು ಅದರಿಂದ ಬಂದ ಆದಾಯದಲ್ಲಿ ತಮ್ಮ ಮನೆಯಲ್ಲಿ ಒಲೆ ಹಚ್ಚುತ್ತಿದ್ದ ಸಣ್ಣ ಮೆಸ್ ಕಾಯಕ ಕುಟುಂಬದ್ದಾಗಿತ್ತು. ಸಂಕಷ್ಟದ ದಿನಗಳೇ ಆಗಿದ್ದವು ಅಂದಿನ ಆ ದಿನಗಳು. ಕಷ್ಟ ನನಗಿರಲಿ ಆದರೆ ನನ್ನ ಮಗನ ಭವಿಷ್ಯ ಸುಂದರವಿರಬೇಕು, ಅದಕ್ಕೆ ಒಳ್ಳೆಯ ವಿದ್ಯೆಯೇ ದಾರಿ ಎಂದು ಅರಿತಿದ್ದ ಇವರ ಅಮ್ಮ ಎಂತಹ ಸಂಕಷ್ಟದಲ್ಲೂ ಇವರನ್ನು ಕಳುಹಿಸಿದ್ದು ಮಾತ್ರ ಅನುಕೂಲಸ್ಥರು ಓದುತ್ತಿದ್ದ ಕಾನ್ವೆಂಟ್‌ನಲ್ಲೇ. ಸಿರಿವಂತರ ನಡುವೆ ಒಬ್ಬ ಬಡ ವಿದ್ಯಾರ್ಥಿಯಾಗಿದ್ದರೂ ಅಲ್ಲೂ ಇವರದ್ದೇ ಛಾಪು ಮೂಡಿಸಿದ್ದರು ಕೀರ್ತಿ ಕುಮಾರ್. ಕಿರಿಕ್‌ನ ಮೊದಲ ದಿನಗಳು ಶುರು ವಾದದ್ದು ಬಾಲ್ಯದಲ್ಲೇ. ಹುಟ್ಟು ತರಲೆ, ಒಂದು ಕಡೆ ನಿಲ್ಲದ ಈ ಹುಡುಗನ ಬಾಲ್ಯದ ನೆನಪುಗಳಲ್ಲಿ ಅನುಭವಿಸಿದ ಸಂಕಷ್ಟಗಳಷ್ಟೇ ಅಲ್ಲ ಸವಿಯಾದ ತುಂಟು ಬಾಲ್ಯದ ನೆನಪುಗಳೂ ಇವೆ.
ನಕಲಿ ಪ್ರಶ್ನೆಪತ್ರಿಕೆಯಿಂದ ಕಿರಿಕ್
ಒಂದಿಲ್ಲೊಂದು ಕಿರಿಕ್‌ಗೂ ಇವರಿಗೂ ಭಾರೀ ನಂಟು ಎನಿಸುತ್ತದೆ. ಬಾಲ್ಯದ ತರಲೆಯ ಕಿರಿಕ್ ಒಂದೆಡೆಯಾದರೆ ಪ್ರೌಢಾವಸ್ಥೆಯಲ್ಲಿ ಮತ್ತೊಂದು ಕಿರಿಕ್, ಅದೇ ಹತ್ತನೇ ತರಗತಿಯಲ್ಲಿನ ನಕಲಿ ಪೇಪರ್ ಹಾವಳಿ. ಗೆಳೆಯರ ಬಳಗವೊಂದು ಪ್ರಶ್ನೆ ಪತ್ರಿಕೆ ಸಿಗುತ್ತೆ ಎಂದು ನಂಬಿಸಿ ಕೊಟ್ಟ ನಕಲಿ ಪತ್ರಿಕೆಯಿಂದಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಕೇವಲ 54% ಅಂಕ ಪಡೆದರು. ಇದರಿಂದಾಗಿ ಕಾಲೇಜು ಸೀಟಿಗೂ ಕಿರಿಕ್ ಶುರುವಾಯ್ತು. ಎನ್‌ಇಎಸ್‌ನಲ್ಲಿ ಜೆಓಸಿ (ಜಾಬ್ ಓರಿಯೆಂಟೆಡ್ ಕೋರ್ಸ್) ಮಾಡಲು ನಿರ್ಧರಿಸಿ, ಅಮ್ಮನಿಗೆ ಅದು ಡಿಪ್ಲೊಮಾಗೆ ಸಮ ಎಂದು ನಂಬಿಸಿ ಜೆಓಸಿ ಮುಗಿಸಿದರು.
ಮಾಧ್ಯಮದತ್ತ ಮೊದಲ ಹೆಜ್ಜೆ
ನಮಗಿಂದು ಕೀರ್ತಿಯವರ ಪರಿಚಯವಿರುವುದು ಮಾಧ್ಯಮಗಳಿಂದ, ಮಾಧ್ಯಮದಿಂದಾಗಿ. ಆದರೆ ಇವರ ಮಾಧ್ಯಮದ ಮೊದಲ ಹೆಜ್ಜೆ ಪ್ರಾರಂಭವಾದದ್ದು ನಮ್ಮ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ. ಜೆಓಸಿ ನಂತರ ಇವರು ಪತ್ರಿಕೋದ್ಯಮದ ಪದವಿಗಾಗಿ ಸಹ್ಯಾದ್ರಿ ಕಾಲೇಜು ಸೇರಿದರು. ಇವರನ್ನು ಪತ್ರಿಕೋದಮಕ್ಕೆ ಪರಿಚಯಿ ಸಿದ್ದು ಸಂತೋಷ್ ಕಾಚಿನಕಟ್ಟೆಯವರು. ಅಲ್ಲಿಂದ ಪ್ರಾರಂಭವಾದ ಇವರ ಮಾಧ್ಯಮದ ಒಡನಾಟ ಇವರನ್ನು ಎಂದೂ ಹಿಂತಿರುಗಿ ನೋಡದ ಮಟ್ಟಕ್ಕೆ ಬೆಳೆಸಿತು. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡವು, ಆದರೆ ಇವರು ಗುರುತಿಸಿಕೊಂಡಿದ್ದು ವಿಜಯ ಕರ್ನಾಟಕದಲ್ಲಿ, ಸುನಾಮಿ ಸಮಯದಲ್ಲಿ ಚೆನ್ನೈನಿಂದ ಬರೆಯುತ್ತಿದ್ದ ನೈಜ ಚಿತ್ರಣಗಳು ಇವರ ಪತ್ರಿಕೋದ್ಯಮದಲ್ಲಿನ ಮೈಲಿಗಲ್ಲು ಎಂದರೆ ತಪ್ಪಿಲ್ಲ. ಕೀರ್ತಿಕುಮಾರ್ ಇಷ್ಟು ಹೊತ್ತಿಗೆ ಕೀರ್ತಿ ಶಂಕರಘಟ್ಟ ಎಂದು ಗುರುತಿಸಿಕೊಂಡಿದ್ದರು. ಮಾಧ್ಯಮ ಇವರಿಗೆ ಕೊಟ್ಟ ಹೆಸರು ಕೀರ್ತಿ ಶಂಕರಘಟ್ಟ.
ತೆರೆಮರೆಯಿಂದ ತೆರೆಯಮೇಲೆ ಮಿಂಚುವವರೆಗೆ
ಇವರಲ್ಲಿದ್ದ ಬರವಣಿಗೆಯ ಶಕ್ತಿಯನ್ನು ಅರಿತಿದ್ದ ಗೆಳತಿಯೊಬ್ಬರು ಇವರನ್ನು ಕಸ್ತೂರಿ ವಾಹಿನಿಯತ್ತ ಕೊಂಡೊಯ್ದರು. ಇವರ ಬರವಣಿಗೆಯೇ ಇವರಿಗೆ ದೃಶ್ಯ ಮಾಧ್ಯಮದಲ್ಲಿ ಅವಕಾಶಕ್ಕೆ ಕಾರಣವಾಯಿತು. ಇಷ್ಟು ದಿನ ತೆರೆಯ ಹಿಂದೆ ಕಾಣಿಸಿಕೊಳ್ಳುತ್ತಿದ್ದ ಪ್ರತಿಭೆ ತೆರೆಯ ಮೇಲೆ ಕಾಣಿಸಿ ಕೊಳ್ಳುವ ಅವಕಾಶಗಳು ಒಂದರ ಹಿಂದೊಂದರಂತೆ. ಇಷ್ಟು ಹೊತ್ತಿಗೆ ಒದಗಿಬಂದ ಮತ್ತೊಂದು ಅವಕಾಶವೆಂದರೆ ಬೆಂಗಳೂರಿನ ಎಫ್‌ಎಂ ರೇಡಿಯೋ ಜಾಕಿ (ಆರ್‌ಜೆ) ಯಾಗುವ ಅವಕಾಶ. ನಿರರ್ಗಳ ಮಾತೇ ಆರ್‌ಜೆಗಳ ಬಂಡವಾಳ. ಅದರಲ್ಲಿ ಕೀರ್ತಿ ಎತ್ತಿದ ಕೈ. ಬಿಗ್ ಬಾಸ್ ಮನೆಯಿಂದ ಎಲ್ಲರಿಗೂ ಪರಿಚಿತರಾಗಿರುವ ಶಾಲಿನಿ ಅಂದು ಎಫ್‌ಎಂನಲ್ಲಿ ಬಾಸ್ ಆಗಿದ್ದರು, ನಿರಂಜನ್ ಕೂಡ ಇವರೊಂದಿಗೆ ಅದೇ ರೇಡಿಯೋ ಚಾನಲ್‌ನಲ್ಲಿ ಕೆಲಸ ಮಾಡುತ್ತಿ ದ್ದರು. ಎಫ್‌ಎಂನಲ್ಲಿ ಇವರು ಮಾಡುತ್ತಿದ್ದ ಕಾರ್ಯಕ್ರಮವೇ ಜನಗಳಿಗೆ ಕರೆ ಮಾಡಿ ‘ಕಿರಿಕ್’ ಮಾಡುವುದು. ಕೀರ್ತಿ ಶಂಕರಘಟ್ಟ ‘ಕಿರಿಕ್ ಕೀರ್ತಿ’ಯಾಗಿದ್ದು ಈ ಎಫ್‌ಎಂನಿಂದಲೇ.
ಎಲ್ಲೆಲ್ಲೂ ಕಿರಿಕ್ ಹಾವಳಿ
ಎಫ್‌ಎಂನಲ್ಲಿ ಇವರ ಕಿರಿಕ್ ಹಿಟ್ ಆಗಿದ್ದೇ ತಡ ಇವರ ನಾಗಾಲೋಟವನ್ನು ಹಿಡಿಯುವವರಿಲ್ಲದಂತಾಯಿತು. ಒಂದರ ಹಿಂದೆ ಒಂದರಂತೆ ಹಲವಾರು ಸುದ್ದಿ ವಾಹಿನಿಗಳಲ್ಲಿ ಕಿರಿಕ್ ಹೆಸರಲ್ಲೇ ಹಲವಾರು ಕಾರ್ಯಕ್ರಮಗಳು ಬರಲು ಪ್ರಾರಂಭಿಸಿದರು. ಈಟಿವಿ ನ್ಯೂಸ್, ಸುವರ್ಣನ್ಯೂಸ್, ಪಬ್ಲಿಕ್ ಟಿವಿ ಹೀಗೆ ಹಲವು ಮಾಧ್ಯಮಗಳಲ್ಲಿ ‘ಕಿರಿಕ್ ಕೀರ್ತಿ’, ‘ಮಿಸ್ಟರ್ ಕಿರಿಕ್’, ‘ಸಿಂಗ್ರಿ ರೌಂಡ್ಸ್’, ಹೀಗೆ ಕೀರ್ತಿ ಮಾಡಿದ್ದೆಲ್ಲಾ ಸೂಪರ್ ಹಿಟ್ ಶೋಗಳೇ. ಇಲ್ಲಿನ ಯಶಸ್ಸು ಇವರನ್ನು ಕೊಂಡೊಯ್ದದ್ದು ಕಲರ‍್ಸ್ ಕನ್ನಡದತ್ತ, ಸೂಪರ್ ಮಿನಿಟ್ ಕಾರ್ಯಕ್ರಮದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕಾಗಿ. ತಿಂಗಳಿಗೆ ಒಂದು ಲಕ್ಷದಷ್ಟು ಸಂಬಳ.
ಲಕ್ಷದ ಸಂಬಳ ತೊರೆದ ದಿಟ್ಟ ನಿರ್ಧಾರ
ಅಂತೂ ಜೀವನ ಒಂದು ತಹಬಂದಿಗೆ ಬಂದಿತು ಎನ್ನುವಷ್ಟರಲ್ಲಿ ಶೋ ಮುಗಿದು ಇವರು ಸುಮ್ಮನೆ ಕಾಯಬೇಕಾದ ಸಮಯ ಬಂತು. ಸಂಬಳ ನಿಲ್ಲಲಿಲ್ಲ ಆದರೆ ಕೆಲಸ ಬೇಕಾದರೆ ಮುಂದಿನ ಕಾರ್ಯಕ್ರಮ ರೂಪುಗೊಳ್ಳುವವರೆಗೂ ಕಾಯಬೇಕಿತ್ತು. ಕೆಲಸ ಮಾಡದೆ ಕೂತು ಸಂಬಳ ತೆಗೆದುಕೊಳ್ಳಲು ಇವರ ಮನಸ್ಸು ಒಪ್ಪಲಿಲ್ಲ. ಕೂಡಲೇ ಕೆಲಸಕ್ಕೆ ರಾಜೀನಾಮೆ ಬರೆದು ಬಿಟ್ಟರು. ಕೈತುಂಬಾ ದುಡಿಯುತ್ತಿದ್ದ ಕೆಲಸ ಬಿಟ್ಟನಲ್ಲಾ ಅನ್ನೋ ಆತಂಕ ಮನೆಯವರಿಗೆ. ಆದರೂ ದಿಟ್ಟ ಮನಸ್ಸು ಮಾಡಿ ಕೆಲಸ ಬಿಟ್ಟು ತಮ್ಮದೇ ಸ್ವಂತ ಉದ್ಯಮ ಪ್ರಾರಂಭಿಸಿದ್ದರು. ಇದಕ್ಕಾಗಿ ಕೈಯಲ್ಲಿದ್ದದ್ದನ್ನೆಲ್ಲಾ ಹೂಡಿದರು. ಮತ್ತೆ ಸಂಕಷ್ಟದ ದಿನಗಳನ್ನು ಎದುರಿಸುವ, ಮೆಲಕು ಹಾಕುವ ಪರಿಸ್ಥಿತಿಯೂ ಬಂದಿತು.
ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆ
ಇಷ್ಟು ಹೊತ್ತಿಗಾಗಲೇ ತಮ್ಮ ‘ಕಿರಿಕ್’ ಕಾರ್ಯಕ್ರಮಗಳ ಮೂಲಕ ತಮ್ಮ ಕನ್ನಡ ಪರ ಪ್ರೀತಿ ಮತ್ತು ಹೋರಾಟವನ್ನು ಜನಕ್ಕೆ ಪರಿಚಯಿಸಿದ್ದ ಕೀರ್ತಿ ಈ ಕೆಲಸ ಬಿಟ್ಟ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪರ ಅರಿವು, ಕಾಳಜಿ, ಹೋರಾಟಗಳನ್ನು ಮುಂದುವರೆಸಿದರು. “ನಾನು ಯಾರಿಗೂ ನನ್ನ ಭಾಷೆ ಕಲಿಯಿರಿ ಎಂದು ಒತ್ತಾಯಿಸುವುದಿಲ್ಲ. ಆದರೆ ನನ್ನ ತಾಯಿ ಭಾಷೆ ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿದರೆ, ಅಗೌರವ ತೋರಿದರೆ ಸುಮ್ಮನಿರಲ್ಲ” ಎನ್ನುವ ಅವರ ಮಾತೇ ಸಾಕ್ಷಿ ಇವರ ಭಾಷಾ ಪ್ರೇಮಕ್ಕೆ. ಫೇಸ್‌ಬುಕ್ ಅಲ್ಲದೆಯೂ ಟ್ಯೂಬ್‌ನಲ್ಲೂ ಇವರ ಕಿರಿಕ್ ವಿಡಿಯೋಗಳು ಎಷ್ಟು ಪ್ರಸಿದ್ಧವಾದವು ಎಂದರೆ ಮಿಲಿಯನ್‌ಗಟ್ಟಲೆ ಫ್ಯಾನ್‌ಗಳು ಹುಟ್ಟಿಕೊಂಡರು. ‘ಯೂ ಟ್ಯೂಬ್ ನೆಕ್ಸ್ಟ್‌ಅಪ್’ ಒಂದು ವಿಶ್ವಮಟ್ಟದ ಶಿಬಿರ. ಇದಕ್ಕೆ ಲಕ್ಷಾಂತರ ಅರ್ಜಿಗಳು ಬಂದಿರುತ್ತವೆ, ಹಲವಾರು ಸುತ್ತುಗಳ ಸಂದರ್ಶನ ನಡೆಯುತ್ತದೆ. ಇಂತಹ ಯೂ ಟ್ಯೂಬ್ ನೆಕ್ಸ್ಟ್‌ಅಪ್‌ಗೆ ಕೀರ್ತಿಯವರು ಆಯ್ಕೆಯಾದರು. ಇಡೀ ಭಾರತದಲ್ಲಿ ಬಂದ ಲಕ್ಷಾಂತರ ಅರ್ಜಿಗಳಲ್ಲಿ ಆಯ್ಕೆಯಾದದ್ದು ಮಾತ್ರ 30 ಮಂದಿ. ಅದರಲ್ಲಿ ಕನ್ನಡದ ಯೂಟ್ಯೂಬ್ ಚಾನೆಲ್ ಒಂದು ಎಂದರೆ ಆ ಹೆಗ್ಗಳಿಕೆ ಕೀರ್ತಿ ಯವರಿಗೆ ಸಲ್ಲಬೇಕು. ಈ ನೆಕ್ಸ್ಟ್‌ಅಪ್‌ನಿಂದಾಗಿ ಕನ್ನಡದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ರಾರಾಜಿಸುವಂತೆ ಮಾಡಿದರು ಕೀರ್ತಿ.
ಒಂದು ಕ್ಷಣ ದಿಗ್ಭ್ರಮೆಯಾಗಿಸಿದ ಆ ಒಂದು ಕರೆ
ಇದ್ದಕ್ಕಿದ್ದಂತೆ ಕಲರ‍್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾದ ಪರಮೇಶ್ ಗುಂಡ್ಕಲ್ ಅವರಿಂದ ಕರೆ ಬಂತು. “ಇದ್ದಕ್ಕಿದ್ದಂತೆ ರಾಜೀನಾಮೆ ಕೊಟ್ಟು ಬಂದಿದ್ದೆ. ದೊಡ್ಡ ಕಾರ್ಪೊರೇಟ್ ಸಂಸ್ಥೆ. ಇರುವ ಸಂಕಷ್ಟದಲ್ಲಿ ಮತ್ತೇನೋ ಹೊಸ ತಲೆಬಿಸಿಯೇ ಅಂತ ಒಂದು ಕ್ಷಣ ಎದೆ ನಡುಗಿತು” ಅನ್ನುವ ಅವರ ಮಾತುಗಳೇ ಸಾಕು ಅವರಿಗಾದ ಆತಂಕ ಬಣ್ಣಿ ಸಲು. ಆದರೆ ಇವರ ಹೆಂಡತಿ ಅರ್ಪಿತಾ ಮಾತ್ರ ಯೋಚಿಸಿದ್ದೇ ಬೇರೆ “ಇದು ಬಿಗ್‌ಬಾಸ್‌ಗಾಗಿ ಕರೆ ಯಾಕಾಗಿರಬಾರದು?” ಎಂದು. “ಛಾನ್ಸೇ ಇಲ್ಲ ಅಪ್ಪು” ಎಂದಿದ್ದ ಕೀರ್ತಿಯವರಿಗೆ ಕಲರ‍್ಸ್ ನೀಡಿದ ಅವಕಾಶ ಬಿಗ್‌ಬಾಸ್‌ನದ್ದು.
ಮನೆಯೊಳಗಿನ ಆಟ – ಬಿಗ್‌ಬಾಸ್
“114 ದಿನಗಳ ಆ ಮಾನಸಿಕ ಹೋರಾಟವನ್ನು ಗೆಲ್ಲುವುದು ಎಲ್ಲರಿಂದ ಸಾಧ್ಯವಿಲ್ಲ. ಇಲ್ಲಿ ನಮ್ಮ ಮಾನಸಿಕ ಹೋರಾಟದೊಡನೆ ಪ್ರೇಕ್ಷಕರ ಮನಗೆಲ್ಲಬೇಕಾಗುತ್ತದೆ. ಆದರೆ ೧೧೪ ದಿನ, ಪ್ರತಿ ನಿಮಿಷವೂ ನಾಟಕ ಮಾಡಿ ಜನರ ಮನ ಗೆಲ್ಲಲು ಸಾಧ್ಯವಿಲ್ಲ. ಅತ್ತಿದ್ದೇನೆ, ಕೋಪ ಮಾಡಿಕೊಂಡಿದ್ದೇನೆ, ಸ್ನೇಹಿತರೊಂದಿಗೆ ಬೆರೆತು ನಲಿದಿದ್ದೇನೆ, ಕುಗ್ಗಿದ್ದೇನೆ, ಹಿಗ್ಗಿದ್ದೇನೆ.. ಇವೆಲ್ಲಕ್ಕಿಂತ ಮಿಗಿಲಾಗಿ ಜನರ ಮನಗೆದ್ದಿದ್ದೇನೆ. ಅದೇ ನಿಜವಾದ ಗೆಲುವು” ಎಂದೇ ಅವರ ಅನುಭವವನ್ನು ಹಂಚಿಕೊಳ್ಳುತ್ತಾರೆ ಕೀರ್ತಿ. ಇದ್ದ ಅಷ್ಟೂ ದಿನವೂ ತಮ್ಮತನವನ್ನು ಉಳಿಸಿಕೊಂಡು, ಪತ್ರಿಕೋದ್ಯಮದ ಕೀರ್ತಿ ಶಂಕರಘಟ್ಟ ಆಗದೆ, ಮಾಧ್ಯಮಗಳ ಕಿರಿಕ್ ಕೀರ್ತಿಯಾಗದೆ, ಸಹಜವಾಗಿ ಕೀರ್ತಿಕುಮಾರ್ ಆಗಿ ಕಾಣಿಸಿಕೊಂಡ ಕೀರ್ತಿ ಎಲ್ಲರ ಮನಗೆದ್ದದ್ದಕ್ಕೆ ಸಾಕ್ಷಿ ಬಿಗ್‌ಬಾಸ್ ರನ್ನರ್ ಅಪ್ ಪಟ್ಟ.
ಬಿಗ್‌ಬಾಸ್ ಯಶಸ್ಸಿನ ನಂತರ ಮತ್ತೆ ‘ಕಿರಿಕ್ ಕೀರ್ತಿ’
ಬಿಗ್‌ಬಾಸ್ ಮುಗಿದರೆ ಸಾಕು ‘ಬಿಗ್‌ಬಾಸ್’ ಎನ್ನುವುದು ಇವರ ಹೆಸರಿನೊಡನೆ ಅಂಕಿತನಾಮವಾಗಿ ಬಿಡುತ್ತದೆ. ಆದರೆ ಕೀರ್ತಿ ಇದಕ್ಕೆ ಒಂದು ರೀತಿಯಲ್ಲಿ ಹೊರತು. ಬಂದಮೇಲೂ ಬಿಗ್ ಬಾಸ್‌ನ ಯಶಸ್ಸನ್ನು ಜನರು ಗುರುತಿಸುತಿದ್ದಾರೆಯಾದರೂ ಇವರು ಕಿರಿಕ್ ಕೀರ್ತಿಯಾಗೇ ಉಳಿದಿರುವುದು ವಿಶೇಷ. ಆದರೆ ಇಲ್ಲಿ ಚರ್ಚೆ ಇರುವುದು ಮತ್ತೊಂದು ‘ಕಿರಿಕ್ ಕೀರ್ತಿ’ಯದ್ದು. ಅದೇ ಅವರ ಮುಂದಿನ ಚಿತ್ರ ‘ಕಿರಿಕ್ ಕೀರ್ತಿ’. ಬಿಗ್‌ಬಾಸ್ ಮನೆಯಲ್ಲಿ ‘ಹುಚ್ಚ’ ಸಿನಿಮಾದ ಮರುಸೃಷ್ಟಿಯಲ್ಲಿನ ಇವರ ಅಭಿನಯಕ್ಕೆ ಮನ ಸೋತ ನಿರ್ದೇಶಕ ಓಂ ಪ್ರಕಾಶ್‌ರಾವ್ , ಕೀರ್ತಿ ಮತ್ತು ಬಿಗ್‌ಬಾಸ್ ಮನೆಯ ಸಂಜನಾ ಜೊತೆಗೆ ಮೈಸೂರಿನ ಮತ್ತೊಬ್ಬ ಬೆಡಗಿ ಯೊಂದಿಗೆ ‘ಕಿರಿಕ್ ಕೀರ್ತಿ’ ಸಿನಿಮಾ ಮಾಡಲು ಸಕಲ ಸಿದ್ಧತೆ ನಡೆಸಿದ್ದಾರೆ ಮತ್ತು ಮಾರ್ಚ್‌ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಅದೃಷ್ಟ ತಂದುಕೊಟ್ಟ ಆವಿಷ್ಕಾರ್
ಪ್ರೀತಿಸಿ ಅರ್ಪಿತಾರನ್ನು ವರಿಸಿದ ಕೀರ್ತಿಯವರಿಗೆ ಅವರಿಗೆಲ್ಲೋ ಸುಖ ಜೀವನ ನೀಡಲಾಗುತ್ತಿಲ್ಲ ಎಂಬ ಕೊರಗು ಕಾಡುತ್ತಿತ್ತು. ಹೀಗೆ ಸಾಗಿದರೆ ಹೇಗೆ ಎಂಬ ಪ್ರಶ್ನೆಯೂ ಮೂಡಿದ್ದುಂಟು. ಆದರೆ ಎಲ್ಲಾ ಕಷ್ಟಗಳಿಗೂ ಕೊನೆಯಿರುತ್ತದೆ ಎನ್ನುವುದು ಜಗದ ನಿಯಮ. ಇವರ ಬಾಳಲ್ಲಿ ಕಷ್ಟಗಳು ಕರಗಿ ಸುಖ ಕಾಣುವ ಸಮಯ ಬಂದಿತು. ಆದರೆ ಆ ಅದೃಷ್ಟ ತಂದದ್ದು ಮಾತ್ರ ತಮ್ಮ ಮಗ ಆವಿಷ್ಕಾರ್ ಅಂತಾರೆ ಕೀರ್ತಿ. “ಅವನು ನನ್ನ ಹೆಂಡತಿಯ ಹೊಟ್ಟೆಯಲ್ಲಿದ್ದಾನೆ ಎಂದು ಸುದ್ದಿ ಬಂದ ದಿನದಿಂದ ನನ್ನ ಅದೃಷ್ಟದ ಬಾಗಿಲು ತೆರೆಯಿತು. ಒಂದರ ಹಿಂದೆ ಒಂದು ಸುವರ್ಣಾವಕಾಶಗಳು ಒದಗಿ ಬಂತು” ಎನ್ನುತ್ತಾರೆ ಕೀರ್ತಿ.