ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಕಳೆದ ಮೂರು ವರ್ಷಗಳಿಂದ ಸತತವಾಗಿ ಚೇತರಿಕೆ ಕಂಡು ೧೨.೩೩ಕೋಟಿರೂ. ಲಾಭದಲ್ಲಿದೆ. ಆದರೆ ಬ್ಯಾಂಕ್ ವಿರುದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಪದೇ ಪದೇ ಸುಳ್ಳು ಹೇಳಿಕೆ ನೀಡುವ ಮೂಲಕ ಬ್ಯಾಂಕಿನ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಬ್ಯಾಂಕಿನ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಸ್ವಯತ್ತ ಸಂಸ್ಥೆ, ೪ ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಈವರೆಗೂ ಕೇಳಿದ ಎಲ್ಲಾ ರೈತರಿಗೂ ಸಾಲ ನೀಡಲಾಗಿದೆ. ೧ಪೈಸೆಯನ್ನೂ ಸರ್ಕಾರದಿಂದ ಪಡೆಯದೆ ರೈತರಿಗೆ ಸೌಲ ಸೌಲಭ್ಯ ನೀಡುತ್ತ ಬಂದಿದೆ. ಆದರೆ ಬ್ಯಾಂಕ್ ಸಾಲ ನೀಡುತ್ತಿಲ್ಲ ಎಂದು ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ತಪ್ಪು ಎಂದರು.
ಚುನಾವಣೆ ಸಂದರ್ಭದಲ್ಲೂ ಕಿಮ್ಮನೆ ಬ್ಯಾಂಕ್ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದರು, ಈಗ ಸಹ ಅದನ್ನು ಮುಂದುವರೆಸಿದ್ದಾರೆ. ಆರ್ಥಿಕವಾಗಿ ಸಧೃಡವಾಗಿರುವ ಬ್ಯಾಂಕ್ ಬಗ್ಗೆ ಈ ರೀತಿ ಮಾತನಾಡ ಬಾರದೆಂದು ಕೋರ್ಟ್ ಮೂಲಕ ತಡೆಯಾe ಪಡೆಯಲಾಗಿದ್ದರೂ ತಮ್ಮ ಚಾಳಿಯನ್ನು ಮುಂದು ವರೆಸಿದ್ದಾರೆ.
ಬ್ಯಾಂಕಿನ ನಗರ ಶಾಖೆಯ ಹಗರಣ ಕುರಿತು ಆಡಳಿತ ಮಂಡಳಿಯೇ ಸಿಓಡಿ ತನಿಖೆಗೆ ಒತ್ತಾಯಿಸಿತ್ತು. ಈ ಬಗ್ಗೆ ಎಲ್ಲಾ ರೀತಿಯ ತನಿಖೆ ಪೂರ್ಣ ಗೊಂಡು ಅಂತಿಮ ವರದಿ ಸಲ್ಲಿಸಿ ೨ ವರ್ಷ ಆಗಿದೆ.
ಆರೋಪ ಬಂದಾಗ ಅಧ್ಯಕ್ಷ ನಾಗಿದ್ದ ನಾನು ರಾಜೀನಾಮೆ ನೀಡಿ ನಿರಪರಾಧಿ ಯಾದ ನಂತರ ಮತ್ತೆ ಅಧಿಕಾರ ಸ್ವೀಕರಿಸಿದೆ. ನಂತರ ಹಂತ ಹಂತವಾಗಿ ಜನರ ವಿಶ್ವಾಸಗಳಿಸಿ ಜನರು ಹಿಂಪಡೆದಿದ್ದ ಠೇವಣಿಯನ್ನು ಮತ್ತೆ ಬ್ಯಾಂಕ್‌ನಲ್ಲಿ ಇಡುವಂತೆ ಮಾಡಲಾಗಿದೆ. ಆಡಳಿತ ಮಂಡಳಿ ಬೇರೆಡೆಯಂತೆ ಹೆಚ್ಚಿನ ಟಿಎ,ಡಿಎ ಪಡೆಯದೆ ಬ್ಯಾಂಕ್‌ನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಎಲ್ಲರ ಪರಿ ಶ್ರದಿಂದಾಗಿ ಈಗ ಬ್ಯಾಂಕ್ ಲಾಭ ಗಳಿಸಿದೆ ಎಂದರು.
ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದಾಗ ೬೯,೭೮೦ ರೈತರಿಗೆ ೧೭೬.೧೦ಕೋಟಿರೂ. ಸಾಲ ಮನ್ನಾ ಆಗಿದೆ. ಈಗ ಹೆಚ್.ಡಿ. ಕುಮಾರ ಸ್ವಾಮಿ ಸಾಲ ಮನ್ನಾ ಮಾಡಿದ್ದರಿಂದ ೪೦,೬೭೮ ರೈತರಿಗೆ ೧೫೪ಕೋಟಿರೂ. ಸಾಲ ಮನ್ನವಾಗುತ್ತಿದೆ. ಒಟ್ಟಾರೆ ಜಿಲ್ಲೆಯ ಬ್ಯಾಂಕ್ ವ್ಯಾಪ್ತಿಯ ೧ಲಕ್ಷಕ್ಕೂ ಹೆಚ್ಚು ರೈತರಿಗೆ ೪೦೮ಕೋಟಿ ರೂ. ಮನ್ನಾ ಆಗಿದೆ. ಈ ಹಣ ಸರ್ಕಾರದಿಂದ ಬರಬೇಕಿದೆ. ಇದಲ್ಲದೆ ಸುಸ್ತಿಬಾಕಿ ಇರುವ ೪೦೮ ರೈತರ ೪.೧೦ಕೋಟಿರೂ. ಸಹ ಮನ್ನಾ ಆಗಿದೆ ಎಂದು ತಿಳಿಸಿದರು.
ರೈತರಿಗಾಗಿ ಇರುವ ಡಿಸಿಸಿ ಬ್ಯಾಂಕ್ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಜನರ ದಿಕ್ಕುತಪ್ಪಿಸುವುದು ಸರಿಯಲ್ಲ. ಬ್ಯಾಂಕ್ ವಿಚಾರದಲ್ಲಿ ರಾಜಕೀಯ ಮಾಡಬಾರದು. ಯಾರಿಗೆ ಆಗಲಿ ಯಾವುದೇ ವಿಚಾರದಲ್ಲಿ ಗೊಂದಲ ಇದ್ದರೆ ಮುಂದಿನ ತಿಂಗಳು ನಡೆಯಲಿರುವ ಮಹಾಸಭೆಯಲ್ಲಿ ಕೇಳಿ ಮಾಹಿತಿ ಪಡೆದುಕೊಳ್ಳಲಿ, ಅದನ್ನು ಬಿಟ್ಟು ಕಲ್ಪಿತ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಮೇಯರ್ ನಾಗರಾಜ್ ಕಂಕಾರಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ತಳ್ಳಿಕಟ್ಟೆ ಮಂಜುನಾಥ್, ಶ್ರೀಪಾದ್ ಹೆಗಡೆ, ದುಗ್ಗಪ್ಪಗೌಡ, ಯೋಗೇಶ್, ಆನಂದ್ ಮತ್ತಿತರರಿದ್ದರು.