Thursday, December 5, 2024
Google search engine
Homeಇ-ಪತ್ರಿಕೆಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ಬರಬೇಕು: ಗೋಪಾಲಕೃಷ್ಣ ಬೇಳೂರು

ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ಬರಬೇಕು: ಗೋಪಾಲಕೃಷ್ಣ ಬೇಳೂರು

ಸಾಗರ : ತಪ್ಪು ಮಾಡಿದವರನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ಬರಬೇಕು. ರಾಜ್ಯ ಸರ್ಕಾರವನ್ನು ಪದೇಪದೇ ಟೀಕಿಸುವ ಬಿಜೆಪಿಯವರು ಕೇಂದ್ರದಲ್ಲಿರುವ ತಮ್ಮ ನೇತೃತ್ವದ ಪಕ್ಷದ ಮೇಲೆ ಅಂತಹ ಕಾನೂನು ಜಾರಿಗೆ ತರಲು ಒತ್ತಡ ಹೇರಲಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ ನೀಡಿದ್ದಾರೆ.

ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಿ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬೇರೆಬೇರೆ ಸಂದರ್ಭದಲ್ಲಿ ಗಲಭೆ ಮಾಡಿದಾಗ ಹಿಂದೂ ಮುಸ್ಲೀಂ ಕ್ರಿಶ್ಚಿಯನ್ ಸೇರಿದಂತೆ ಯಾವುದೇ ಧರ್ಮದವನು ಮಾಡಿದ್ದರೂ ಅವನಿಗೆ ಏಕರೂಪದ ಶಿಕ್ಷೆ ನೀಡಬೇಕು. ಅಂತಹ ಕಾನೂನು ತರಲಿ. ನಿಮ್ಮ ಕೈನಲ್ಲಿ ಸಾಧ್ಯವಿಲ್ಲ ಎಂದರೆ ಸರ್ಕಾರ ನಮ್ಮ ಕೈಗೆ ಕೊಡಿ ನಾವು ಅಂತಹ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಹೇಳಿದರು.

ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ದುರುಪಯೋಗಕ್ಕೆ ಸಂಬಂಧಪಟ್ಟಂತೆ ಯಾರೇ ತಪ್ಪು ಮಾಡಿದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಒಂದೊಮ್ಮೆ ಸಚಿವರು ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆ ಕೊಡಲಿ. ಬಿಜೆಪಿ ಸರ್ಕಾರ ಇದ್ದಾಗ ಈಶ್ವರಪ್ಪ ಯಾಕೆ ರಾಜಿನಾಮೆ ಕೊಟ್ಟರು. ಸಚಿವ ನಾಗೇಂದ್ರ ಪರ ನಾನು ಮಾತನಾಡುವುದಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಸರ್ಕಾರದ ಹಣ ದುರುಪಯೋಗ ಮಾಡುವುದನ್ನು ಸಹಿಸುವುದಿಲ್ಲ. ಈಗಾಗಲೆ ಪ್ರಕರಣವನ್ನು ಎಸ್‍ಐಟಿಗೆ ವಹಿಸಲಾಗಿದೆ. ಸಿಬಿಐಗೆ ವಹಿಸಿದರೂ ಚಿಂತೆಯಿಲ್ಲ. ಒಟ್ಟಾರೆ ನ್ಯಾಯಯುತ ತನಿಖೆ ನಡೆಸಿ ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿಯ ಆತ್ಮಕ್ಕೆ ಶಾಂತಿ ಸಿಗುವಂತೆ ಆಗಬೇಕು ಎಂದರು.  

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲುವಿಗೆ ಪೂರಕ ವಾತಾವರಣವಿದೆ. ನೈಋತ್ಯ ಪದವೀಧರ ಕ್ಷೇತ್ರದ ಆಯನೂರು ಮಂಜುನಾಥ್ ಮತ್ತು ಶಿಕ್ಷಕ ಕ್ಷೇತ್ರದ ಕೆ.ಕೆ.ಮಂಜುನಾಥ್ ಪರವಾಗಿ ಮತದಾರರು ಒಲವು ಹೊಂದಿದ್ದು, ಇಬ್ಬರೂ ಸುಲಭವಾಗಿ ಗೆಲ್ಲುತ್ತಾರೆ. ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಅತಿಹೆಚ್ಚು ಸ್ಥಾನ ಪಡೆಯುವ ಮೂಲಕ ವಿಧಾನ ಪರಿಷತ್‍ನಲ್ಲಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲಿದೆ. ರಾಜ್ಯ ಸರ್ಕಾರ ನಮ್ಮದೆ ಇರುವುದರಿಂದ ವಿಧಾನ ಪರಿಷತ್ ಚುನಾವಣೆ ನಂತರ ಎನ್‍ಪಿಎಸ್ ನೌಕರರ ಬೇಡಿಕೆಯನ್ನು ಸರ್ಕಾರ ಈಡೇರಿಸಲಿದ್ದು, ಎನ್‍ಪಿಎಸ್ ನೌಕರರ ಪರವಾಗಿ ನಾನು ನಿಲ್ಲುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರ ಅಧ್ಯಕ್ಷ ಐ.ಎನ್.ಸುರೇಶಬಾಬು, ಮಹಿಳಾ ಕಾಂಗ್ರೇಸ್ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ಪ್ರಮುಖರಾದ ಉಷಾ.ಎನ್, ಸೋಮಶೇಖರ ಲ್ಯಾವಿಗೆರೆ, ಗಣಪತಿ ಮಂಡಗಳಲೆ, ಮಧುಮಾಲತಿ, ಸರಸ್ವತಿ ನಾಗರಾಜ್, ಬಿ.ಎ.ಇಂದೂಧರ ಗೌಡ, ಮಹ್ಮದ್ ಖಾಸಿಂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular

Recent Comments