ಡಾ. ದಯಾನಂದ್. ಎ.ಎಸ್., MBBS, MD, DNB
ನೆಫ್ರೋಲಾಜಿಸ್ಟ್, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ಶಿವಮೊಗ್ಗ
’ಡಯಾಲಿಸಿಸ್’ ಕಿಡ್ನಿ ವೈಫಲ್ಯಕ್ಕೆ ಉತ್ತಮ ಚಿಕಿತ್ಸೆ- ಇಲ್ಲಿದೆ ಒಂದು ಪರಿಚಯ
ಮೂತ್ರಪಿಂಡಗಳು ವೈಫಲ್ಯವಾದಾಗ ದೇಹದಲ್ಲಿ ಹಾನಿಕಾರಕ ತ್ಯಾಜ್ಯ ವಸ್ತುಗಳು ಸೇರಿಕೊಳ್ಳುತ್ತದೆ. ಡಯಾಲಿಸಿಸ್ ಎಂದರೆ ರಕ್ತದಲ್ಲಿ ಹೆಚ್ಚುವರಿಯಾಗಿರುವ ನೀರು ಮತ್ತು ತ್ಯಾಜ್ಯವನ್ನು ತೆಗೆದು, ಆರೋಗ್ಯಕ್ಕೆ ಪೂರಕವಾದ ದ್ರವಾಂಶಗಳನ್ನು (ಫ್ಲೂಯಿಡ್ಸ್) ರಕ್ತಕ್ಕೆ ಸೇರಿಸುವ ಒಂದು ಪ್ರಕ್ರಿಯೆ. ಅಂದರೆ ರಕ್ತವನ್ನು ಶುದ್ಧೀಕರಿಸುವ ಕ್ರಿಯೆಯಾಗಿದೆ. ಆರೋಗ್ಯವಂತ ಮೂತ್ರಕೋಶ ಮಾಡುವ ಕೆಲಸವೂ ಇದೇ ಆಗಿದ್ದು, ಅದು ವೈಫಲ್ಯವಾದಾಗ ಆ ಕೆಲಸವನ್ನು ಡಯಾಲಿಸಿಸ್ ಮೂಲಕ ಮಾಡಬಹುದಾಗಿದೆ. ಕಾರಣಾಂತರಗಳಿಂದ ಕಿಡ್ನಿ ಕೆಲಸ ಮಾಡದಿರುವಾಗ ಯಂತ್ರದ ಸಹಾಯದಿಂದ ರಕ್ತವನ್ನು ಶುದ್ಧ ಮಾಡುವುದೇ ಡಯಾಲಿಸಿಸ್.
ಡಯಾಲಿಸಿಸ್ ವಿಧಾನಗಳು
ಹೆಮೋ ಡಯಾಲಿಸಿಸ್ :-
ರಕ್ತವನ್ನು ನೇರವಾಗಿ ಶುಚಿ ಮಾಡುವುದು ಹೆಮೋ ಡಯಾಲಿಸಿಸ್ . ಇದರ ಯಂತ್ರೋಪಕರಣ ಬಹಳ ದುಬಾರಿಯಾಗಿದ್ದು ಇದನ್ನು ಆಸ್ಪತೆಯಲ್ಲಿಯೇ ಮಾಡಬೇಕು.
ಪೆರಿಟೋನಿಯಲ್ ಡಯಾಲಿಸಿಸ್ :-
ಹೊಟ್ಟೆಯಲ್ಲಿ ನೀರು ತುಂಬಿಸಿ ಮಾಡುವ ಚಿಕಿತ್ಸೆ. ಇದನ್ನು ಅವಿದ್ಯಾವಂತರೂ ಕೂಡಾ ೩-೪ ದಿನಗಳಲ್ಲಿ ಕಲಿಯಬಹುದಾದ ವಿಧಾನ. ಸ್ವಲ್ಪ ದುಬಾರಿಯೇ ಆದರೂ ಆಸ್ಪತ್ರೆಯ ಸುತ್ತಾಟವಿಲ್ಲದೆ ಸೂಜಿಯನ್ನು ಚುಚ್ಚಿಸಿಕೊಳ್ಳದೆ, ಮನೆಯಲ್ಲೇ ಮಾಡಿಕೊಳ್ಳುವ ವಿಧಾನವಾಗಿದೆ.
ಡಯಾಲಿಸಿಸ್ ನಿಮ್ಮ ಪಥ್ಯ ಹೀಗಿರಲಿ
* ಹಣ್ಣಿನ ರಸ ಮತ್ತು ಎಳನೀರನ್ನು ಸೇವಿಸಬಾರದು. ಇದನ್ನು ಹೊರತುಪಡಿಸಿ ಬೇರೆ ಎಲ್ಲಾ ಆಹಾರವನ್ನು ಸೇವಿಸಬಹುದು.
* ಉಪ್ಪನ್ನು ಬಹಳ ಮಿತವಾಗಿ ಬಳಸಿ. ಹೆಚ್ಚುವರಿ ಉಪ್ಪು ಉಪಯೋಗಿಸದೇ ಇರುವುದು ಒಳ್ಳೆಯದು.
* ವಾರಕ್ಕೆ ಎರಡು ಬಾರಿ ಮಾತ್ರ ಡಯಾಲಿಸಿಸ್ ಮಾಡಿಸುತ್ತಿದ್ದರೆ ಸ್ವಲ್ಪ ಮಟ್ಟಿಗೆ ಹಣ್ಣು ಹಂಪಲು ಸೇವಿಸಬಹುದು.
* ಪ್ರೋಟೀನ್ ಅಂಶಗಳು ಹೆಚ್ಚಿರುವ ಪದಾರ್ಥಗಳನ್ನು ಸೇವಿಸುವುದು ಅಗತ್ಯ.
* ಮೂಳೆಗಳನ್ನು ಧೃಡವಾಗಿ ಮತ್ತು ರಕ್ತವನ್ನು ಆರೋಗ್ಯವಾಗಿರಿಸಲು ಅಗತ್ಯವಾದ ಹಾರ್ಮೋನ್‌ಗಳನ್ನು ಅವಶ್ಯಕತೆಗೆ ತಕ್ಕಂತೆ ತೆಗೆದುಕೊಳ್ಳಿ.
ಮಧುಮೇಹ, ಹೃದ್ರೋಗ ಮತ್ತು ಕಿಡ್ನಿಯ ಆರೋಗ್ಯ
ಮಧುಮೇಹದಿಂದ ಕಿಡ್ನಿ ಖಾಯಿಲೆ ಬಂದರೆ ಅದು ಹೃದಯ ಮತ್ತು ಕಣ್ಣುಗಳಿಗೆ ತುಂಬಾ ಅಪಾಯಕಾರಿ ಯಾಗುತ್ತದೆ. ಅಧ್ಯ ಯನದ ಪ್ರಕಾರ ಶೇ.೮೦ ರಷ್ಟು ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವವರು ಕೊನೆಕೊನೆಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಹತ್ತಿರವಾಗುತ್ತಾರೆ ಎಂಬುದು ದೃಢವಾಗಿದೆ. ಮಧುಮೇಹ ನೇರವಾಗಿ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಅದು ಕಿಡ್ನಿ ವೈಫಲ್ಯಕ್ಕೆ ದಾ ರಿಯಾಗುತ್ತದೆ. ಅದಕ್ಕೂ ಮುನ್ನ ಹೃದಯ ಮತ್ತು ಮೆದುಳಿನವರೆಗೂ ಹಾದು ಹೋಗುವ ರಕ್ತನಾಳಗಳಿಗೆ ರಕ್ತ ತರುತ್ತದೆ. ಹೀಗೆ ಒಂದಕ್ಕೊಂದು ಅನಪೇಕ್ಷೀಯ ಸಂಬಂಧ ಹೊಂದಿದೆ. ಅಂದರೆ ಕಿಡ್ನಿ ವೈಫಲ್ಯವಾದರೆ ಹೃದ್ರೋಗ ಗ್ಯಾರಂಟಿ ಅಥವಾ ಹೃದ್ರೋಗ ಬಂದರೆ ಕಿಡ್ನಿ ವೈಫಲ್ಯ ಉಚಿತ ಎಂಬಂ ತಾಗಿದೆ. ಕಿಡ್ನಿ ವೈಫಲ್ಯದಿಂದ ರಕ್ತದಲ್ಲಿ ಬೆರೆತ ಕಲ್ಮಷವು ಹೃದಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಹೃದಯ ಮತ್ತು ಕಿಡ್ನಿ ಎರಡರ ಆರೋಗ್ಯ ಮತ್ತು ಚಿಕಿತ್ಸೆಯತ್ತ ಗಮನ ಹರಿಸಬೇಕು.
ಡಯಾಲಿಸಿಸ್ ವಾರಕ್ಕೆಷ್ಟುಬಾರಿ ಅಗತ್ಯ?
ಸಂಪೂರ್ಣ ವಿಫಲವಾದ ಕಿಡ್ನಿಗೆ ವಾರಕ್ಕೆ ೧೨ ಗಂಟೆಯ ಡಯಾಲಿಸಿಸ್ ಅಗತ್ಯವಿರುತ್ತದೆ. ಹೀಗಾಗಿ ವಾರಕ್ಕೆ ಮೂರು ಬಾರಿ ನಾಲ್ಕು ಗಂಟೆಯ ಡಯಾಲಿಸಿಸ್ ಮಾಡಲಾಗುತ್ತದೆ. ಎಷ್ಟೋ ಬಾರಿ ಹಣದ ಸಮಸ್ಯೆ ಗಳಿಂದ ವಾರಕ್ಕೆ ಒಂದೋ ಎರಡೋ ಮಾಡಿಸಿ ಸುಮ್ಮನಾಗುವವರು ಹೆಚ್ಚು. ಹೀಗಾದಾಗ ಕ್ರಮೇಣ ತ್ಯಾಜ್ಯಗಳು ರಕ್ತದಲ್ಲಿ ಸೇರಿ ಹೃದಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗೆ ತಪ್ಪಿಸಿದರೆ ತಿಂದ ಆಹಾರ ದೇಹಕ್ಕೆ ಸೇರದೇ ಇರುವುದು, ಎದೆಯಲ್ಲಿ ನೀರು ತುಂಬಿ ಉಬ್ಬಸ, ರಕ್ತದೊತ್ತಡ ಜಾಸ್ತಿಯಾಗುವುದು, ಮೂಳೆಗಳ ಸಾಂದ್ರತೆ ಕಡಿಯಾಗುವುದು, ಹೀಗೆ ಹತ್ತು ಹಲವು ಸಮಸ್ಯೆಗಳು ಪ್ರಾರಂಭವಾಗುತ್ತದೆ.
ಡಯಾಲಿಸಿಸ್ ಮಾಡಿಸುತ್ತಿದ್ದರೂ ರಕ್ತಹೀನತೆಯ ಚುಚ್ಚುಮದ್ದು ಏಕೆ?
ಕಿಡ್ನಿ ವೈಫಲ್ಯದ ಮತ್ತೊಂದು ಪರಿಣಾಮ ಎಂದರೆ ರಕ್ತಹೀನತೆ. ಕಿಡ್ನಿ ಉತ್ಪಾದಿಸುವ ಎರಿತ್ರೋ ಪೋ ಯೆಟಿನ್ ಎಂಬ ಹಾರ್ಮೋನ್ ರಕ್ತ ತಯಾರಿಸುವಂತೆ ಉತ್ತೇಜಿಸಿದರೆ ಮಾತ್ರ ರಕ್ತ ತಯಾರಾಗುವುದು. ಕಿಡ್ನಿ ವೈಫಲ್ಯದಿಂದ ಈ ಹಾರ್ಮೋನ್ ಉತ್ಪಾದನೆ ನಿಲ್ಲುತ್ತದೆ, ಆಗ ರಕ್ತ ಹೀನತೆ ಕಾಡಲು ಪ್ರಾರಂಭವಾಗುತ್ತದೆ. ಹಾಗಾಗಿ ಎರಿತ್ರೋಪೋಯೆಟಿನ್ ಹಾರ್ಮೋನ್‌ಅನ್ನು ಚುಚ್ಚುಮದ್ದಿನ ಮೂಲಕ ದೇಹಕ್ಕೆ ನೀಡಲಾಗುವುದು. ಇದನ್ನು ಡಯಾಲಿಸಿಸ್ ನಡೆಯುತ್ತಿರುವಾಗಲೇ ರಕ್ತನಾಳಕ್ಕೆ ಕೊಡಬಹುದಾದ್ದರಿಂದ ನೋವುಂಟಾಗುವುದಿಲ್ಲ.