ಸಕ್ಕರೆ ಸವಿಯ ನವಾಬ

ವಿಮರ್ಶಕರು : ಬಿ.ನಾಗರಾಜ್

ಕೆಂಪು ಬಸ್ಸುಗಳ ಸಡಗರ ಕಿರಿಕಿರಿ ಎನಿಸುತ್ತಿದೆ. ಶಾಂತವಾಗಿದ್ದ ನಾನಿಯಮ್ಮಳನ್ನು ಒಂದು ಹಂತದಲ್ಲಿ ಸಾಕಿಕೊಂಡಂತಿದ್ದ  ಕೆರೆ ಎಲ್ಲೀಗ ಪಟ್ಟಣದ ಒಳಗೇ ಕೆರೆ ಇತ್ತಲ್ಲ. ಕೆಂಪು ಬಸ್ಸುಗಳ ಡಿಪೋ ಆಗಿಬಿಟ್ಟಾಗ ಮೀನು ಹಿಡಿಯುವುದೆಲ್ಲಿ? ಸೊಪ್ಪು ಸೆದೆ ಕೀಳುವುದೆಲ್ಲಿ ? ಕೆರೆ ಏರಿಯಲ್ಲಾ ಸಮತಟ್ಟಾಗಿ, ಇಲ್ಲೊಂದು ಕೆರೆ ಇತ್ತಾ? ಎಂದು ಪ್ರಶ್ನಿಸುವಂತಹ ಆಶ್ಚರ್ಯಪಡುವಂತಹ ರೀತಿಯಲ್ಲಿ ಎಲ್ಲದೂ ಬದಲಾಗಿ ಹೋಗಿದೆ’

ಹೀಗೆ ನವಾಬನಿಗೆ ಸಮೃದ್ಧ ಕತೆಯ ಆಗರವಾಗಿದ್ದ ಕೆರೆಯಂಗಳ ಬದಲಾಗಿ ಹೋದುದು ಕಥೆಗಾರನಿಗೆ  ನೋವು ತರಿಸಿರುವ ವಿಚಾರ. ಓದುಗರಲ್ಲೂ ವಿಷಾದ ಮೂಡಿಸುತ್ತದೆ.

‘ಬೆಳಿಗ್ಗೆ  ಇದ್ದ ಜೀವ ಈಗಿಲ್ಲ. ಜೀವ ಬಿಡುವವರೆಗೂ ಜಹೆರಾಬೀ, ಅಜ್ಜಿ, ಬಡೇ ಅಮ್ಮಿ, ಭೂವಜ್ಜಿ,ಮುದುಕಿ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ನನ್ನ ಅಮ್ಮಿಯ ಅಮ್ಮಿ. ಅರ್ಥಾತ್‌ ಅಜ್ಜಿ, ಮೆಗ್ಗಾನ್ ಆಸ್ಪತ್ರೆಯ ತುರ್ತು ನಿಗಾ ಘಟಕದ ಲೇಬರ್ ವಾರ್ಡಿನಲ್ಲಿ ಜೀವ ಬಿಟ್ಟು ಮಲಗಿದ್ದಾಳೆ ! ಜೀವವಿಲ್ಲದೆ ಮಲಗಲು ಸಾಧ್ಯವೇ? ಜೀವ ಹೋದ ಮೇಲೆ ದೇಹ ನೆಲಕ್ಕೆ ಚೆಲ್ಲಿದೆ. ನೆಲಕ್ಕೆ ಚೆಲ್ಲಿದೆ ಎಂದ ಮೇಲೆ ದೇಹವೀಗ ಮಣ್ಣಿನ ಸ್ವತ್ತು ಎಂಬಲ್ಲ ಪಾಶರಲ್ಲಿನ ಕಥೆಗಾರ ವಾಸ್ತವ ನೆಲೆಗಟ್ಟಿನ ಘೋರ ಸತ್ಯವನ್ನು ತೆರೆದಿಡುವ ರೀತಿಯೋ ಹೆಚ್ಚು ಅಪ್ಯಾಯಮಾನವಾಗುತ್ತದೆ.

ಶಿ.ಜು. ಪಾಶರವರು ಬರೆದಿರುವ ‘ಕೆರೆಯಂಗಳದ ನವಾಬ’ಹಲವು ಕಾರಣಗಳಿಗಾಗಿ ಮನಸ್ಸಿನಲ್ಲಿ ಉಳಿದುಬಿಡುವ, ಸದಾಕಾಲ ಕಾಡುವ ವಿಶಿಷ್ಟ ಕಥಾ ಸಂಕಲನ.

ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರಾದ ಶಿ.ಜು.ಪಾಶ ಕಥೆಗಳಲ್ಲಿ ಆಯ್ದುಕೊಂಡಿರುವ ಪಾತ್ರಗಳು ‘ಕಪೋಲಕಲ್ಪಿತವಲ್ಲ. ಸುತ್ತಮುತ್ತಲಿನ ಬದುಕಿನ ಕಠೋರ ವಾಸ್ತವಿಕತೆಯನ್ನು ಹೆಣೆದಿರುವ ರೀತಿ ಅವರೊಬ್ಬ ಅತ್ಯುತ್ತಮ ಕಥೆಗಾರ ಎಂಬುದನ್ನು ಸಾಬೀತು ಪಡಿಸುತ್ತದೆ. ಕೆರೆಯಂಗಳದ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿರುವ ರೀತಿಯೇ ಅದ್ಭುತ. ಬಹುತೇಕ ಮುಸಲ್ಮಾನ ಕುಟುಂಬಗಳ ಬದುಕೇ ನವಾಬ ಸಂಕಲನದ ಕಥಾವಸ್ತು.

ಬಹುಶಃ ಬೇರೆಯವರು ಈ ಕಥೆಗಳನ್ನು ಬರೆದಿದ್ದರೆ, ಜಾಳು,ಜಾಳಾಗುವ ಸಾಧ್ಯತೆ ಇತ್ತು. ಆದರೆ ಪಾಶ ಅವರ ಅನುಭವದ ಮೂಟೆ ಬಲು ದೊಡ್ಡದು. ಹೀಗಾಗಿ ತಾವು ಬೆಳೆದು ಬಂದ ಪರಿಸರವನ್ನೇ ಕಥಾ ಗಾರನಾಗಿ ಚಿತ್ರಿಸಿರುವ ಪರಿ ನಿಜಕ್ಕೂ ಹೆಮ್ಮೆ ಎನಿಸುತ್ತದೆ.

‘ಖತ್ನಾ’ದಂತಹ ಸಣ್ಣ ವಿಷಯವನ್ನು ಕೂಡಾ ಮನೋಜ್ಞವಾಗಿ ಬರೆಯುವ ಕಲೆಗಾರಿಕೆ ಈ ಕಥೆಗಾರರಿಗೆ ಮಾತ್ರ ಸಾಧ್ಯ. ಮುಸ್ಲಿಮರಾಗಿ ಹುಟ್ಟಿದ್ದರೆ ಪಾಶರಂತಯೇ ಗಟ್ಟಿ ಅನುಭವ ಪಡೆದುಕೊಳ್ಳಬಹದಿತ್ತು ಎಂಬ ಹೊಟ್ಟೆ ಕಿಚ್ಚು  ಮೂಡುವಷ್ಟು ಸೊಗಸಾಗಿ  ಬರೆದಿದ್ದಾರೆ.

ಚಿಕ್ಕ , ಚಿಕ್ಕ ಸಂಗತಿಗಳನ್ನು ಕಥೆಗಾರ ನೋಡುವ ಪರಿ ಬೆರಗು ಮೂಡಿಸುವಂತಹುದು. ಇಲ್ಲಿನ ಕಥೆಗಳು ಬಹುತೇಕ ಸ್ಲಂ ವಾಸಿಗಳ ನಿತ್ಯದ ಬದುಕು, ಜಂಜಾಟ, ಹಸಿವು, ಕಾಮ, ವಿಷಾದ, ನೋವು, ನಲಿವು ಎಲ್ಲವನ್ನೂ  ಒಳಗೊಂಡಿವೆ.

ಪಾತ್ರಗಳನ್ನು ಸೃಷ್ಟಿಸುವ ಜಾಣ್ಮೆ ಅವುಗಳನ್ನು ಕಟ್ಟಿಕೊಡುವ ರೀತಿ, ಪಾತ್ರಗಳನ್ನು ಜೀವಂತವಾಗಿರಿಸಿರುತ್ತದೆ. ಇಲ್ಲೇ ಎಲ್ಲೋ ನಮ್ಮ ಸುತ್ತಮುತ್ತವೇ ಈ ಪಾತ್ರಗಳು  ಜೀವಿಸಿವೆ ಎಂಬ ಭಾವನೆ ಮೂಡುತ್ತದೆ.

ಬದುಕಿನ ಸಂಕೀರ್ಣ ವಿಚಾರಗಳನ್ನು ಕೆದಕುವ, ಆಸ್ವಾದಿಸುವ ಪರಿ ಬೆರಗು  ಮೂಡಿಸುವಂತಹದು.

‘ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಹಕ್ಕಿಗಳ ಕಲರವ ಕೇಳಿಸುತ್ತಿಲ್ಲ. ನನಗಷ್ಟೇ ಬೇಸರವಾಗಿಲ್ಲ- ಹಕ್ಕಿಗಳಿಗೂ ಮೂಡು ಕೆಟ್ಟಿರಬೇಕು ಎಂಬ ದೃಷ್ಟಾಂತದೊಂದಿಗೆ ಆರಂಭಿಸುವ ಡೆಡ್‌ಹೌಸ್ ಎಂಬ ಹೆಣ ಕೊಯ್ಯುವ ಶೀನಣ್ಣನ ಕುರಿತಾಗಿ , ಹಸಿಬಿಸಿ ಅನುಭವದ ಸಂಕೇತದ ರಾಜಿ, ಪದ್ಮಕ್ಕ, ಇಡ್ಲಿ ಹನುಮಂತು, ಮಂಜಣ್ಣ, ಸುಡುಗಾಡು, ಕೆರೆಯಂಗಳದ ಸಂತೆ,  ಸತ್ಯಮ್ಮಳ ಗಂಡ ಸದಣ್ಣನ ಆಕ್ಸಿಡೆಂಟು, ಮುನೀರ್ ಮಾವ ಮತ್ತು ಖುರ್ಬಾನಿ, ಕಲಾಂ ಸಿಕ್ಕಿದ್ರು, ನಾನಿಯಮ್ಮ  ಹೀಗೆ ಹಲವು ಪಾತ್ರಗಳು ಮನಸ್ಸಿನೊಳಗೆ ಇಳಿದು ಬಿಡುತ್ತವೆ.

ಇಲ್ಲಿನ ಕಥೆಗಳು ಕೇವಲ ಕಥೆ ಗಳಾಗಿ ಓದಿಸಿಕೊಳ್ಳುವುದಿಲ್ಲ. ಬದಲಾಗಿ ಪ್ರತಿಯೊಂದು ಪಾತ್ರವೂ ನಮ್ಮ ಕಣ್ಮುಂದೆ ನಿಲ್ಲುತ್ತವೆ. ಪ್ರತಿ ಪಾತ್ರಗಳು ಸ್ಲಂ ನಿವಾಸಿ ಬಡ ಮುಸ್ಲಿಮರ ಶೋಚನೀಯ ಬದುಕನ್ನು ಅನಾವರಣಗೊಳಿಸುತ್ತಾ ಹೋಗುತ್ತವೆ.

ಮುಸ್ಲಿಂರ ಭಾಷೆ , ಅವರ ಜೀವನ ಶೈಲಿ, ಆಚಾರ, ವಿಚಾರ, ಬದುಕಿನ ಪದ್ಧತಿ ಕುರಿತು ಬಹಳಷ್ಟು ಮಂದಿಗೆ ಕಲ್ಪನೆ ಕೂಡಾ ಇರಲಾರದು. ಪಾತ್ರಗಳ ಆಳ ಹೊಕ್ಕು ಅವುಗಳ ಅನಾವರಣದ ಜೊತೆಗೆ ಗಟ್ಟಿ ಅನುಭವಗಳನ್ನು  ಕಟ್ಟಿ ಕೊಡುವ ರೀತಿ ಖುಷಿ ಅನಿಸುತ್ತದೆ.

ಇಲ್ಲಿನ ಹಲವು ಕಥೆಗಳು ಮತ್ತೆ ಮತ್ತೆ ಓದಬೇಕೆಂಬ ಹಂಬಲ ಮೂಡಿಸುತ್ತವೆ. ಪಾತ್ರಗಳ ಸಂಭಾಷಣೆಗಳನ್ನು ಕಟ್ಟಿಕೊಡುವ ರೀತಿ ನಿಜಕ್ಕೂ ಅದ್ಭುತ. ಹಿತಮಿತ ಎನಿಸುತ್ತವೆ.

ಪಾತ್ರವೇ ತಾನಾಗಿರುವ ಕಥೆಗಾರ. ಓದುಗರನ್ನು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವಂತೆ ಕಥನ ಶೈಲಿ ರೂಢಿಸಿಕೊಂಡಿದ್ದಾರೆ. ಕೆಲವೆಡೆ ಇನ್ನಷ್ಟು ಬರೆಯಬೇಕಿತ್ತು ಎಂಬ ಬಯಕೆ ಮೂಡಿಸುವ ಪರಿ. ಪಾಶರ ಲೇಖನಿಯಲ್ಲಿರುವ ಶಕ್ತಿಯನ್ನು ತೋರಿಸುತ್ತದೆ.

ಹೊಸದಾಗಿ ಬರೆಯುವವರು ಮಾತ್ರವಲ್ಲದೆ ಅನುಭವಿ ಕಥೆಗಾರರಿಗೆ ಪಾಶರ  ಕಥನಾ ಶೈಲಿ ಮಾದರಿ ಯಾಗಿದೆ. ಅವರ ಲೇಖನಿಯಿಂದ ಇನ್ನಷ್ಟು, ಮಗದಷ್ಟು, ಚೆಂದದ ಕಥೆಗಳು ಮೂಡಿಬರಲಿ ಎಂದು ಓದುಗರು ಆಶಿಸುವಷ್ಟು ಪಾಶ ಪ್ರಬುದ್ಧರಾಗಿ ಬೆಳೆದಿದ್ದಾರೆ.