ಬೆಂಗಳೂರು: ಬೆಂಗಳೂರು ವಿಶ್ವವಿಖ್ಯಾತವಾಗಿದ್ದರೆ ಅದಕ್ಕೆ ನಾಡಪ್ರಭು ಕೆಂಪೇಗೌಡರು ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಇಂದು ವಿಧಾನಸೌಧದಲ್ಲಿರುವ ಕೆಂಪೇಗೌಡರ 515 ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಜನಾನುರಾಗಿ ಪ್ರಭುಗಳು. ಕೃಷ್ಣದೇವರಾಯನ ಕಾಲದಲ್ಲಿ ಬೆಂಗಳೂರನ್ನು ಸ್ಥಾಪಿಸಿದ್ದಲ್ಲದೆ ಅನೇಕ ಕೆರೆಗಳನ್ನು ಕಟ್ಟಿಸಿದರು. ಅವರ ಕಾಲದಲ್ಲಿಯೇ ಅತಿ ಹೆಚ್ಚು ದೇವಸ್ಥಾನ, ಕೆರೆಗಳು ನಿರ್ಮಾಣವಾಯಿತು ಎಂದು ಹೇಳಿದ್ದಾರೆ.
ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತವಾದವರಲ್ಲ. ಜಾತ್ಯಾತೀತರಾಗಿ ಅವರು ಬದುಕಿದಂತೆ ಸಮಾಜದ ಎಲ್ಲ ಜನರು ಬದುಕಿ ಅವರನ್ನು ಸ್ಮರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
“ನಾಡಿನ ಜನತೆ ಕೆಂಪೇಗೌಡರ ದಿನಾಚರಣೆಯನ್ನು ಆಚರಿಸಿ ಸಂಭ್ರಮಿಸುವುದಲ್ಲದೇ ಕೆಂಪೇಗೌಡರು ಸಮಾಜಮುಖಿಯಾಗಿ ಕೆಲಸ ಮಾಡಿದಂತೆ ಪ್ರತಿಯೊಬ್ಬರೂ ಸಮಾಜಮುಖಿಯಾಗಿ, ವಿಶ್ವಮಾನವರಾಗಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂಬ ಕಾರಣದಿಂದ ಕೆಂಪೇಗೌಡರ ಜಯಂತಿ ಆಚರಿಸಲಾಗುತ್ತಿದೆ” ಎಂದರು.
ವಿಶೇಷವಾಗಿ, ವೃತ್ತಿಯಾಧಾರದ ಮೇಲೆ ಚಿಕ್ಕಪೇಟೆ, ದೊಡ್ಡಪೇಟೆ, ನಗರ್ತಪೇಟೆ , ತಿಗಳರಪೇಟೆ, ಬಳೆಪೇಟೆಗಳನ್ನು ನಿರ್ಮಿಸಿ ನಗರವನ್ನು ವ್ಯಾಪಾರ ಕೇಂದ್ರವನ್ನಾಗಿಸಲು ನಾಡಪ್ರಭು ಕೆಂಪೇಗೌಡರು ಪ್ರಯತ್ನಪಟ್ಟಿದ್ದಾರೆ ಎಂಧು ಹೇಳಿದ್ದಾರೆ.
ಮೊದಲಬಾರಿಗೆ ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ತೀರ್ಮಾನ ಮಾಡಿದ್ದು, ಕೆಂಪೇಗೌಡರ ಪ್ರಾಧಿಕಾರ ರಚನೆ ಮಾಡಿದ್ದು ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಂದು ಸ್ಮರಿಸಿದರು. ಕೆಂಪೇಗೌಡರ ಆಡಳಿತ ನಮಗೆಲ್ಲಾ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.