ರಾಜ್ಯ ಬಜೆಟ್ – 2017-18 ಅನ್ನದಾತನಿಗೆ ಕಹಿ-ಸರ್ಕಾರಿ ನೌಕರರಿಗೆ ಸಿಹಿ

1,85,561 ಲಕ್ಷ ಕೋಟಿ ರೂ. ಬಜೆಟ್ ಮಂಡನೆ ರೈತರ ಸಾಲ ಮನ್ನಾ ಇಲ್ಲ – 7ನೇ ವೇತನ ಆಯೋಗರಚನೆ ಜನಪ್ರತಿನಿಧಿಗಳು-ಪರಿಶಿಷ್ಟರಿಗೆ ಭರಪೂರ ಕೊಡುಗೆ ೪೯ ಹೊಸ ತಾಲೂಕುಗಳ ಘೋಷಣೆ


ರಾಜ್ಯದ 2017-18ನೇ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಮಂಡಿಸಿದರು.
ಹಣಕಾಸು ಸಚಿವರಾಗಿ 12 ಬಾರಿ, ಮುಖ್ಯಮಂತ್ರಿಯಾಗಿ 5 ಬಾರಿ ಬಜೆಟ್ ಮಂಡನೆ ಮಾಡಿದ ಸಿದ್ಧರಾಮಯ್ಯ ಈ ಬಾರಿ ವಿಶೇಷವಾಗಿ ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದರಾದರೂ ಸಹ ಬಹುನಿರೀಕ್ಷಿತ ರೈತರ ಸಾಲ ಮನ್ನಾ ಮಾಡುವಲ್ಲಿ ಆಸಕ್ತಿ ತೋರಿಲ್ಲ.

ಬಡ್ಡಿ ರಹಿತ ಸಾಲವನ್ನು ಹೆಚ್ಚಳ ಮಾಡುವ ಮೂಲಕ ರೈತರಿಗೆ ಸ್ವಲ್ಪ ಮಟ್ಟಿನ ನೆರವನ್ನು ಕಲ್ಪಿಸಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಬಜೆಟ್‌ನಲ್ಲಿ ನೀಡಿರುವ ಮುಖ್ಯಮಂತ್ರಿಗಳು, 1ನೇ ತರಗತಿಯಿಂದಲೇ ಆಂಗ್ಲ ಭಾಷೆಯನ್ನು ಕಲಿಸುವ ಪ್ರೌಢಶಾಲಾ ಮತ್ತು ಪಿಯು ಉಪನ್ಯಾಸಕರ ನೇಮಕಾತಿಗೆ ಒತ್ತನ್ನು ನೀಡುವ ಮೂಲಕ ಶಿಕ್ಷಣದ ಬಗ್ಗೆ ಒಲವನ್ನು ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಮಹತ್ವಾಕಾಂಕ್ಷೆ ಬೇಡಿಕೆಗಳಲ್ಲಿ ಒಂದಾದ ವೇತನ ಆಯೋಗದ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಸಿಎಂ, ನಿರೀಕ್ಷೆಯಂತೆ ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗವನ್ನು ರಚನೆ ಮಾಡುವುದಾಗಿ ತಿಳಿಸಿದ್ದಾರೆ. ರೈತರ ಸಾಲ ಮನ್ನಾ ವಿಚಾರವನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಇದರಿಂದಾಗಿ ಅನ್ನದಾತ ಸಮೂಹಕ್ಕೆ ತೀವ್ರ ನಿರಾಸೆ ಉಂಟಾಗಿದೆ.

ಈ ಪೈಕಿ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಮೀಸಲಿಟ್ಟಿದ್ದು, ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಕರ್ಯ ಸಮಸ್ಯೆಗೆ ಪರಿಹಾರ ಕಲ್ಪಿಸಲು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಉನ್ನತ ಶಿಕ್ಷಣಕ್ಕೆ 4401 ಕೋಟಿ, ವೈದ್ಯಕೀಯ ಶಿಕ್ಷಣಕ್ಕೆ 2004 ಕೋಟಿ ರೂ. ಹಣ ಮೀಸಲಿಟ್ಟಿದ್ದಾರೆ.

ಮುದ್ರಾಂಕ ಶುಲ್ಕ ಸಂಗ್ರಹಣೆ ಇಳಿಕೆ-ವಾಹನ ನೋಂದಣಿ ಏರಿಕೆ

ನೋಟುಗಳ ಅಮಾನ್ಯೀಕರಣದಿಂದ ವ್ಯಾಟ್ ಸಂಗ್ರಹದ ಮೇಲೆ ಪರಿಣಾಮ ಬೀರದೆ ಇದ್ದರೂ, ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಮೇಲೆ ಅಡ್ಡಪರಿಣಾಮ ಬೀರಿದೆ. 2016-17ನೆ ಸಾಲಿನಲ್ಲಿ 9100ಕೋಟಿ ರೂಗಳ ರಾಜಸ್ವ ಗುರಿ ನಿಗದಿಪಡಿಸಲಾಗಿತ್ತು. ನೋಟು ಅಮಾನೀಕರಣವಾಗದೆ ಇದ್ದಿದ್ದರೆ ನಿಗದಿತ ತೆರಿಗೆ ಸಂಗ್ರಹಿಸಲಾಗುತ್ತಿತ್ತು. 2016ರ ನವೆಂಬರ್ ನಂತರ ದಸ್ತಾವೇಜುಗಳ ನೋಂದಣಿ ಸಂಖ್ಯೆಯಲ್ಲಿ ಶೇ.೨೫ರಷ್ಟು ಇಳಿಮುಖವಾಗಿದೆ.

2016-17ನೆ ಸಾಲಿಗೆ 5116 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ವಾಹನಗಳ ನೋಂದಣಿಯಲ್ಲಿ ಏರಿಕೆಯಾಗಿ 5450 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. 290 ಕೋಟಿ ಹೆಚ್ಚುವರಿ ಕೋಟಿ ತೆರಿಗೆ ಬೊಕ್ಕಸಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ 6006 ಕೋಟಿ ರೂ.ಗಳ ತೆರಿಗೆ ಸಂಗ್ರಹದ ಗುರಿ ನಿಗದಿಯಾಗಿದೆ. 2010ರಿಂದ ಈವರೆಗೂ ಮೋಟಾರು ವಾಹನ ತೆರಿಗೆ ಹೆಚ್ಚಳ ಮಾಡಿಲ್ಲ. ಆದ್ದರಿಂದ 1ಲಕ್ಷ ಮೇಲ್ಪಟ್ಟ ಬೆಲೆಯುಳ್ಳ ದ್ವಿಚಕ್ರ ವಾಹನಗಳಿಗೆ ಮಾತ್ರ ಶೇ.12 ರಷ್ಟಿದ್ದ ತೆರಿಗೆಯನ್ನು ಶೇ.18ಕ್ಕೆ ಹೆಚ್ಚಿಸಲಾಗಿದೆ. ಇದರಿಂದ 60 ಕೋಟಿ ರೂ.ನಷ್ಟು ಹೆಚ್ಚುವರಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ.

5 ರೂ.ಗೆ ತಿಂಡಿ, 10 ರೂ.ಗೆ ಊಟ. ಬೆಂಗಳೂರಿನಲ್ಲಿ 198 ನಮ್ಮ ಕ್ಯಾಂಟೀನ್
ಆರಂಭಿಸಲು ಬಜೆಟ್‌ನಲ್ಲಿ ಚಿಂತನೆ. ಪ್ರಾಯೋಗಿಕವಾಗಿ ಬೆಂಗಳೂರಿನ
198 ವಾರ್ಡ್‌ಗಳಲ್ಲಿ ತಲಾ ಒಂದೊಂದು ನಮ್ಮ ಕ್ಯಾಂಟೀನ್. ಎಲ್ಲಾ
ಜಿಲ್ಲೆಗಳಲ್ಲೂ ಸ್ತ್ರೀ ಸಂಘಗಳ ಮೂಲಕ ಸವಿರುಚಿ ಸಂಚಾರಿ ಕ್ಯಾಂಟಿನ್
ಜನಪ್ರತಿನಿಧಿಗಳ ಗೌರವ ಧನ ಹೆಚ್ಚಳ

ವೇತನ ಆಯೋಗ ರಚನೆ
ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಂತೆ ವೇತನ ಹೆಚ್ಚಳ ಸಂಬಂಧ ಏಳನೆ ವೇತನ ಆಯೋಗ ರಚನೆ ಮಾಡಲಾಗಿದೆ. ಆಯೋಗ ಅಂತಿಮ ವರದಿ ನೀಡಿದ ನಂತರ ವೇತನವನ್ನು ಪರಿಷ್ಕರಣೆ ಮಾಡಲಾಗುವುದು. ಸ್ವಾತಂತ್ರ್ಯಯೋಧರ ಮಾಸಾಶನವನ್ನು 8 ಸಾವಿರದಿಂದ 10 ಸಾವಿರ ಹಾಗೂ ಗೋವಾ ವಿಮೋಚನಾ ಹೋರಾಟಗಾರರ ಮಾಸಾಶನವನ್ನು 3 ಸಾವಿರದಿಂದ 4 ಸಾವಿರಕ್ಕೆ ಏರಿಕೆ.

ರಾಜ್ಯದಲ್ಲಿ ವಕೀಲರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ವಕೀಲರ ಪರಿಷತ್‌ಗೆ ನೀಡುತ್ತಿದ್ದ ಎರಡು ಕೋಟಿ ರೂ.ಗಳ ಅನುದಾನವನ್ನು ೫ ಕೋಟಿ ರೂ.ಗಳಿಗೆ ಹೆಚ್ಚಳ.

ಜಿಪಂ ಸದಸ್ಯರ ಗೌರವ ಧನ 3 ಸಾವಿರ ದಿಂದ 4 ಸಾವಿರಕ್ಕೆ ಏರಿಕೆ
ತಾಪಂ ಸದಸ್ಯರ ಗೌರವ ಧನ 4.5 ಸಾವಿರದಿಂದ 6 ಸಾವಿರಕ್ಕೆ ಏರಿಕೆ
ಗ್ರಾಪಂ ಸದಸ್ಯರ ಗೌರವ ಧನ 1 ಸಾವಿರದಿಂದ 3 ಸಾವಿರಕ್ಕೆ ಏರಿಕೆ

* ರೈತರ ಸಾಲ ಮನ್ನಾ ಇಲ್ಲ
* ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ
* ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ವರೆಗೆ ಸಾಲ ಸೌಲಭ್ಯ
*ಶೇ.3 ರ ಬಡ್ಡಿದರದಲ್ಲಿ 10 ಲಕ್ಷ ದವರೆಗೆ ಕೃಷಿ ಸಾಲ
* 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳ ಘೋಷಣೆ
* 25 ಲಕ್ಷ ರೈತರಿಗೆ 13,500 ಕೋಟಿ ರೂ. ಸಾಲ ನೀಡುವ ಗುರಿ
* ಅನ್ನಭಾಗ್ಯದಡಿ ಪ್ರತಿ ವ್ಯಕ್ತಿಗೆ ೫ ಕೆಜಿ ಅಕ್ಕಿಯಿಂದ 7 ಕೆಜಿಗೆ ಏರಿಕೆ
* ಒಂದನೇ ತರಗತಿಯಿಂದಲೇ ಆಂಗ್ಲ ಪಠ್ಯ ಬೋಧನೆ
* ರಾಜ್ಯದಲ್ಲಿ ಐದು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಆರಂಭ
* ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ಐದು ದಿನ ಹಾಲು ವಿತರಣೆ
* 8-10ನೇ ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ, ಸಮವಸ್ತ್ರ ವಿತರಣೆ
* ರಾಜ್ಯದಲ್ಲಿ 176 ಸಂಯೋಜಿತ ಕಾಲೇಜುಗಳ ಸ್ಥಾಪನೆ
* ಖಾಸಗಿ ಸಂಸ್ಥೆಗಳಲ್ಲಿ ಎಸ್‌ಸಿ-ಎಸ್‌ಟಿ ಕಾರ್ಮಿಕರಿಗೆ ಉದ್ಯೋಗ
* ವಿಶ್ವ ಕನ್ನಡ ಸಮ್ಮೇಳನ ಆಯೋಜನೆಗೆ 20 ಕೋಟಿ ರೂ. ಮೀಸಲು
* ಕರಾವಳಿ ಭಾಗದಲ್ಲಿ ಪಶ್ಚಿಮ ವಾಹಿನಿ ಯೋಜನೆ ಜಾರಿ
* ಗ್ರಾಮೀಣ ಪ್ರದೇಶದಲ್ಲಿ 2500 ಶುದ್ಧ ನೀರಿನ ಘಟಕ ಸ್ಥಾಪನೆ
* ದುಬಾರಿ ದ್ವಿಚಕ್ರ ವಾಹನ ಕೊಳ್ಳುವವರಿಗೆ ಬರೆ
* ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಗರಿಷ್ಠ ಟಿಕೆಟ್ ದರ 200 ರೂ.
* ಬಿಯರ್ ಲಿಕ್ಕರ್, ಫೆನ್ನಿ, ವೈನ್, ಮೌಲ್ಯ ವರ್ಧಿತ ತೆರಿಗೆ ರದ್ದು
* ಮದ್ಯದ ಮೇಲೆ ಹೆಚ್ಚುವರಿಯಾಗಿ ಅಬಕಾರಿ ಸುಂಕ
* ರಾಜ್ಯದ ೯ ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಕೇಂದ್ರ ಆರಂಭ
* ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ
* ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಉಚಿತ ವೈಫೈ
* ರಾಜ್ಯದ ಬರ ಪೀಡಿತ ಪ್ರದೇಶಗಳಲ್ಲಿ 30 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯ
* ನೀರಿನ ಟ್ಯಾಂಕರ್ ಖರೀದಿಸುವ ರೈತರಿಗೆ 50 ಸಾವಿರ ಸಹಾಯ ಧನ
* ಹನಿ ನೀರಾವರಿ ಅಳವಡಿಸಿಕೊಳ್ಳುವ ರೈತರಿಗೆ ಶೇ.90 ರಷ್ಟು ಸಬ್ಸಿಡಿ
* ಕಾರವಾರ, ಮಡಿಕೇರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿಮಾನ ಇಳಿದಾಣ ನಿರ್ಮಾಣ
* ರಾಜ್ಯದ ಪ್ರತಿ ಮಾಂಸದಂಗಡಿಗೆ 1.25 ಲಕ್ಷ ರೂ ಸಹಾಯ ಧನ ನೆರವು
* ಟೆಂಡರ್ ಶ್ಯೂರ್ ಮಾದರಿಯಲ್ಲಿ 25 ಕಿ.ಮೀ ರಸ್ತೆ ಅಭಿವೃದ್ಧಿ
* 690 ಕೋಟಿ ವೆಚ್ಚದಲ್ಲಿ ರಸ್ತೆಗಳು ಮೇಲ್ದರ್ಜೆಗೆ
* 250 ಕೋಟಿ ವೆಚ್ಚದಲ್ಲಿ ಟೆಂಡರ್ ಶ್ಯೂರ್ ರಸ್ತೆಗಳ ನಿರ್ಮಾಣ
* 2 ಸ್ಟ್ರೋಕ್ ಅಟೋಗಳ ರದ್ದತಿಗೆ ಕ್ರಮ
* ಎಲ್‌ಪಿಜಿ ಅಟೋ ರಿಕ್ಷಾಗಳಿಗೆ 30 ಸಾವಿರ ರೂ.ಸಹಾಯ ಧನ
* ಅಪಘಾತದಲ್ಲಿ ಹಸು ಎತ್ತು ಸಾವನ್ನಪ್ಪಿದರೆ 10 ಸಾವಿರ ರೂ.ಪರಿಹಾರ
* 10 ಸಾವಿರ ಅಟೋಗಳಿಗೆ ಇ-ಸಹಾಯ ಧನ
* ರಾಜ್ಯದ 16 ಪ್ರವಾಸಿ ಕೇಂದ್ರಗಳು ವಿಶ್ವದರ್ಜೆಗೆ ಅಭಿವೃದ್ಧಿ
* ಕರ್ನಾಟಕ ಶಾಲಾ ಶಿಕ್ಷಣ ನೀತಿ ಜಾರಿಗೆ ನಿರ್ಧಾರ
* ಶ್ರವಣಬೆಳಗೊಳ ಮಹಾಮಸ್ತಾಭಿಷೇಕಕ್ಕೆ 175 ಕೋಟಿ ಅನುದಾನ
* ಕೃಷಿ ಕ್ಷೇತ್ರಕ್ಕೆ 4080 ಕೋಟಿ ರೂಪಾಯಿ ಮೀಸಲು
* 1626 ಪ್ರೌಢಶಿಕ್ಷಕರ ನೇಮಕ.
* ಪ್ರೌಢಶಿಕ್ಷಣ ಇಲಾಖೆಗೆ 18,266 ಕೋಟಿ ರೂ.ಮೀಸಲು.
* ೨ ಹಂತಗಳಲ್ಲಿ 1191 ಪಿಯು ಉಪನ್ಯಾಸಕರ ನೇಮಕ.
* ಖಾಸಗಿ ಸಂಸ್ಥೆಗಳಲ್ಲಿ ನಿವೃತ್ತಿ ವಯಸ್ಸು ೫೮ ರಿಂದ 60ಕ್ಕೆ ಏರಿಕೆ
* ಉಚಿತವಾಗಿ ನೀಡುತ್ತಿರುವ ವಿದ್ಯುತ್ ಪ್ರಮಾಣ ಹೆಚ್ಚಳ
* ವೈದ್ಯಕೀಯ ಇಂಜಿನಿಯರಿಂಗ್ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್
* ರಾಜ್ಯದ ಮೂರು ಪಟ್ಟಣಗಳಲ್ಲಿ ಹೊಸ ಆರ್‌ಟಿ ಓ ಕಚೇರಿಗಳ ಸ್ಥಾಪನೆ
* ಕೃಷಿ ಭಾಗ್ಯ ಯೋಜನೆಗೆ 600 ಕೋಟಿ ರೂ.ಮೀಸಲು
* ತೋಟಗಾರಿಕೆ ಇಲಾಖೆಗೂ ಕೃಷಿ ಭಾಗ್ಯ ಯೋಜನೆ ವಿಸ್ತರಣೆ
* ತೋಟಗಾರಿಕೆ ಇಲಾಖೆಗೆ 1091 ಕೋಟಿ ರೂಪಾಯಿ ನಿಗದಿ
* ರಾಜ್ಯದಲ್ಲಿ ಹೊಸ 6 ಮೆಡಿಕಲ್ ಕಾಲೇಜುಗಳ ಆರಂಭ
* ಕೊಳಚೆ ಪ್ರದೇಶದ ನಿವಾಸಿಗಳಿಗೆ 10 ಸಾವಿರ ಲೀಟರ್ ಉಚಿತ ಶುದ್ಧ ನೀರು ವಿತರಣೆ
* ರಾಜ್ಯದ 21 ಜಿಲ್ಲೆಗಳಲ್ಲಿ 49 ತಾಲೂಕು ಕೇಂದ್ರಗಳ ಘೋಷಣೆ
* ರಾಜ್ಯದಲ್ಲಿ ಹೊಸದಾಗಿ 430 ಗ್ರಾಮ ಪಂಚಾಯಿತಿಗಳ ಆರಂಭ
* ರಾಜ್ಯ ಎಲ್ಲಾ ಆಶಾ ಕಾರ್ಯಕರ್ತರಿಗೆ 1 ಸಾವಿರ ರೂ.ವಿಶೇಷ ಗೌರವ ಧನ
* ಶೌಚಾಲಯಕ್ಕಾಗಿ ಸಮರ ಹೆಸರಲ್ಲಿ ಯೋಜನೆ ಜಾರಿ
* 28 ಲಕ್ಷ ಶೌಚಾಲಯ ನಿರ್ಮಾಣ ಗುರಿ
* ಒಲಿಂಪಿಕ್ ರಜತ ಪದಕ ವಿಜೇತರಿಗೆ ೩ ಕೋಟಿ ರೂ. ಬಹುಮಾನ
* 60 ರಿಂದ 64 ವಯಸ್ಸಿನವರಿಗೆ ವೃದ್ಧಾಪ್ಯ ವೇತನ 200 ರೂ.ದಿಂದ 500 ರೂ ಗೆ ಹೆಚ್ಚಳ
* ಉಚಿತ ವಿದ್ಯುತ್ ವಿಚರಣೆ ಪ್ರಮಾಣ ೧೮ ಯುನಿಟ್‌ನಿಂದ ೪೦ ಯುನಿಟ್‌ಗೆ ಏರಿಕೆ
* 16,500 ನರ್ಸ್‌ಗಳಿಗೆ ಕಂಪ್ಯೂಟರ್ ಟ್ಯಾಬ್ ವಿತರಣೆ
* ರಾಜ್ಯದಾದ್ಯಂತ 4023 ಬಾಪೂಜಿ ಸೇವಾ ಕೇಂದ್ರ ಆರಂಭ