Karajolಶಿವಮೊಗ್ಗ : ರಾಜ್ಯದಲ್ಲಿ ಯಾವುದೇ ಅಭಿ ವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ವಿವಿಧ ಯೋಜನೆಯ ಮಾಶಾಸನವನ್ನು ಬಿಡುಗಡೆ ಮಾಡಿಲ್ಲ, ಇದರಿಂದಾಗಿ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ಸದ್ಯದ ಪರಿಸ್ಥಿತಿ ಏನು ಎಂಬು ದರ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ಒತ್ತಾಯಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳಾಯಿತು. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಮಾಶಾಸನ ಕೊಡದ ದುಸ್ಥಿತಿಗೆ ಸರ್ಕಾರ ತಲುಪಿದಂತೆ ಇದೆ. ಸರ್ಕಾರ ದಿವಾಳಿ ಆಗಿದೆಯಾ? ಎಂದು ಪ್ರಶ್ನಿಸಿದರು.
ರಾಜ್ಯದ ಹಲವು ತಾಲೂಕುಗಳಲ್ಲಿ ಭೀಕರ ಬರಗಾಲ ವಿದೆ ಮುಖ್ಯಮಂತ್ರಿಗಳು ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ಬರ ಪರಿಹಾರಕ್ಕೆ ಪ್ರತಿ ತಾಲೂಕಿಗೆ ತಕ್ಷಣ ೫ ಕೋಟಿ ರೂ ಬಿಡುಗಡೆ ಮಾಡಬೇಕು. ಜನ ಜಾನುವಾರು ರಕ್ಷಣೆಗೆ ಘೋಷಣೆ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ತಮ್ಮ ರಾಜಕೀಯ ಅನುಭವದಲ್ಲಿ ಇಂತಹ ಕೆಟ್ಟ ಸರ್ಕಾರ ಹಿಂದೆ ನೋಡಿರಲಿಲ್ಲ. ಅಧಿಕಾರಿಗಳಿಗೆ ಸರ್ಕಾರದ ಮೇಲೆ ಹೆದರಿಕೆ ಇಲ್ಲವಾಗಿದೆ. ಜೆಡಿಎಸ್ ಕಾಂಗ್ರೆಸ್ ಶಾಸಕರು ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾವೇರಿ ಇಂದ ಭೀಮಾ ನದಿವರೆಗೆ ಇರುವ ಸರ್ಕಾರವಲ್ಲ. ಇದು ಕೇವಲ ಮೈಸೂರು ಭಾಗಕ್ಕೆ ಸೀಮಿತವಾದ ಸರ್ಕಾರವಾಗಿದೆ ಎಂದು ಲೇವಡಿ ಮಾಡಿದರು.
ಕೇವಲ ಜಾತಿ ರಾಜಕಾರಣ ಮಾಡಿಕೊಂಡು ಅಲ್ಪಸಂಖ್ಯಾತರನ್ನು ದೀನ ದಲಿತರನ್ನು ಹೋಲಿಕೆ ಮಾಡಿಕೊಂಡು ಬಣ್ಣದ ಮಾತುಗಳನ್ನು ಮಾಡುವುದನ್ನು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಿಲ್ಲಿಸಬೇಕು. ಯಾವುದೇ ಒಂದು ಜಾತಿ ಧರ್ಮ ಒಂದು ಪಕ್ಷದ ಸ್ವತ್ತಲ್ಲ, ಇದನ್ನು ಅರ್ಥ ಮಾಡಿಕೊಂಡು ನಾಡಿನ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕೆಂದರು
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂಬುದಕ್ಕೆ ಅವರ ಪಕ್ಷದಲ್ಲಿ ವಿರೋಧವಿದೆ. ಮುಂದಿನ ಲೋಕಸಭಾ ಚುನಾವಣೆಗೂ ಮೊದಲೇ ಕಾಂಗ್ರೆಸ್ ಮತ್ತೊಮ್ಮೆ ಇಬ್ಭಾಗವಾಗುವುದು ಖಚಿತ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ಗೆ ವಾರಸುದಾರರಿಲ್ಲದ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಪ್ರಮುಖರಾದ ನಾರಾಯಣಸ್ವಾಮಿ ಲಿಂಗಪ್ಪ ಮಹದೇವಪ್ಪ ಶಿವಾಜಿ ರಾವ್ ಮಧುಸೂದನ್ ರತ್ನಾಕರ ಶೆಣೈ ಮತ್ತಿತರರು ಉಪಸ್ಥಿತರಿದ್ದರು.