ಕಪ್ಪಿಟ್ಟ ಮಳೆ ಮೋಡ, ಭಾರೀ ಮಳೆ ಬರುವ ನಿರೀಕ್ಷೆ

ಶಿವಮೊಗ್ಗ : ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಮತ್ತೆ  ಅಬ್ಬರಿಸುವ ನಿರೀಕ್ಷೆಗಳಿವೆ. ಶನಿವಾರ ಬೆಳಗಿನ ಜಾವ ನಗರವೂ ಸೇರಿದಂತೆ ಜಿಲ್ಲೆ ಹಲವಡೆ ಧಾರಕಾರವಾದ ಮಳೆ ಸುರಿದಿದೆ. ಮತ್ತೆ ಬೆಳಗಿನಿಂದಲೇ ಆಗಸದಲ್ಲಿ ಮಳೆ ಮೋಡಗಳು ಕಪ್ಪಿಟ್ಟು, ಭಾರೀ ಮಳೆ ಸುರಿಯವ ಮುನ್ಸೂಚನೆಗಳು ದಟ್ಟವಾಗಿವೆ.

 ಮಳೆ ಮೋಡದ ವಾತಾವರಣ ದಟ್ಟ ಮಳೆಗಾಲದ ಅನುಭವ ನೀಡುತ್ತಿದೆ. ಬೆಳಗ್ಗೆಯಿಂದಲೇ ಸೂರ್ಯನ ದರ್ಶನವೇ ಕಾಣದಂತೆ ಮೋಡ ಕವಿದಿದೆ. ಆಗಲೋ, ಈಗಲೋ ಮಳೆ ಬಂದೇ ಬಿಡುವ ವಾತಾವರಣ ನಿರ್ಮಾಣವಾಗಿದೆ.

ಹೆಚ್ಚು ಕಡಿಮೆ ಒಂದು ವಾರದಿಂದ ಲೇ ಜಿಲ್ಲಾದ್ಯಂತ ಹದವರಿತ ಮಳೆ ಸುರಿಯುತ್ತಿದೆ. ಗುರುವಾರ ಸಂಜೆಯಂತೂ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಹೋಬಳಿಯಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದೆ. ಕಳೆದ ಸೋಮವಾರ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದ ಶಿವಮೊಗ್ಗ ನಗರದ ತೋಯ್ದ ತೊಪ್ಪೆಯಾಗಿತ್ತು. ಈಗ ಮತ್ತೆ ಶನಿವಾರ ಬೆಳಗಿನ ಜಾವವೂ ಅಧಿಕ ಪ್ರಮಾಣದ ಮಳೆ ಸುರಿದಿದೆ. ದಿನವೀಡಿ ಶನಿವಾರ ಮೋಡದ ಕವಿದ ವಾತಾವರಣ ನಿರ್ಮಾಣವಾಗಿದೆ.

ಕಳೆದ ಮಳೆಗಾಲದ ವೇಳೆ ಮುಂಗಾರು ಮಳೆ ಕೊರತೆ ಹಾಗೂ ಪ್ರಸ್ತುತ  ಬೇಸಿಗೆ ವೇಳೆ ಕಂಡು ಬಂದ ತೀವ್ರ ಪ್ರಮಾಣದ ಬಿಸಿಲಿನ ಪ್ರಖರತೆಯಿಂದ ಒಣಗಿ ಬಿರುಕು ಬಿಟ್ಟಿದ್ದ ಕರೆ ಕಟ್ಟೆಗಳಿಗೆ ಈಗ ಜೀವ ಕಳೆ ಬಂದಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕೆರೆ ಕಟ್ಟೆಗಳಿಗೆ ನೀರು ಬಂದಿದ್ದು, ಜನ ಜಾನುವಾರುಗಳಿಗೂ ನೀರಿನ ಸೌಕರ್ಯ ಲಭ್ಯವಾಗಿದೆ.