ಶಿವಮೊಗ್ಗ: ಕನ್ನಡದ ಮೊಟ್ಟ ಮೊದಲ ಪ್ಯಾರಲಲ್ (ಸಮಾನಂತರ) ಲೈಪ್‌ನ ಕತೆಯುಳ್ಳ “ಹೆಜ್ಜಾರ” ಸಿನಿಮಾ ಜು.19ರಂದು ರಾಜ್ಯಾದಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಹರ್ಷಪ್ರಿಯ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೆಜ್ಜಾರು ಒಂದು ವಿಭಿನ್ನ ಚಿತ್ರವಾಗಿದೆ. ಒಬ್ಬರ ಜೀವನದಲ್ಲಿ ನಡೆದ ಘಟನೆಯೇ ಮತ್ತೊಬ್ಬರ ಜೀವನದಲ್ಲಿ ಅದೇ ಘಟನೆ ನಡೆದು ಅದಕ್ಕೆ ಪರಿಹಾರ ಕಂಡುಹಿಡಿಯುವ ಕೌತುಕ ಚಿತ್ರವಿದು ಎಂದರು.
ಹಳಬರು ಮತ್ತು ಹೊಸಬರು ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಕೆ.ಎಸ್.ರಾಮೋಜಿಯವರ ಗಗನ ಎಂಟರ್‌ಪ್ರೈಸಸ್‌ನ ಅಡಿಯಲ್ಲಿ ವಿಮಲ ಎನ್., ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರದ ಟೀಜರ್ ಅತ್ಯಂತ ಯಶಸ್ವಿಯಾಗಿದೆ. ಒಳ್ಳೆಯ ಸಿನಿಮಾ ಬರುತ್ತಿರುವ ಸೂಚನೆಯನ್ನು ದೊಡ್ಡಮಟ್ಟದಲ್ಲಿಯೇ ಪ್ರೇಕ್ಷಕರಿಗೆ ನೀಡಿದೆ ಎಂದರು.
ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಕೂಡ ಚಿತ್ರದ ಟೀಜರ್‌ನ್ನು ನೋಡಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಆತ್ಮ ಸ್ಥೈರ್ಯವನ್ನು ಹೆಚ್ಚಿಸಿದೆ. ಇಡೀ ಸಿನಿಮಾ ಮಳೆಯಲ್ಲಿಯೇ ಚಿತ್ರಕರಣವಾಗಿರುವುದು ಮತ್ತೊಂದು ವಿಶೇಷ. ಮಂಗಳೂರು ಸುತ್ತಮುತ್ತಲ ಜಾಗದಲ್ಲಿ ಚಿತ್ರಿಕರಣ ಮಾಡಲಾಗಿದೆ. ಅಮರ್‌ಗೌಡ ಅವರ ಕ್ಯಾಮರಾ ಕೈಚಳಕ, ಮನಸ್ಸು ಮತ್ತು ಕಣ್ಣಿನೊಳಗೆ ಇಳಿಯುತ್ತದೆ ಎಂದರು.
3 ಸುಂದರವಾದ ಹಾಡುಗಳಿವೆ. ಹಾಡುಗಳಿಗೆ ನಾನೇ ಸಾಹಿತ್ಯ ಬರೆದಿದ್ದೇನೆ. ಈಗಾಗಲೇ ಪುಟ್ಟಗೌರಿ, ಜೊತೆಜೊತೆಯಲ್ಲಿ, ಮಹಾನಾಯಕ ಅಂಬೇಡ್ಕರ್ ಎಂಬ ಹಲವು ಕಿರುಚಿತ್ರಕ್ಕೆ ಸಾಹಿತ್ಯ ಬರೆದ ಅನುಭವವು ನನಗಿದೆ. ಪೂರ್ಣಚಂದ್ರ ತೇಜಸ್ವಿಯವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವಿಜಯಪ್ರಕಾಶ್ ಹಾಡಿದ ಏನೇ ಸಿಕ್ತು ಮಳ್ಳಿ ನಿಂಗೆ’ ಎಂಬ ಹಾಡು ಅತ್ಯಂತ ಜನಪ್ರಿಯವಾಗಿದೆ. ಹಾಗೆಯೇ ಇವನ್ಯಾರೋ ಎಂಬ ರೋಮ್ಯಾಟಿಂಗ್ ಲವ್ ಸಾಂಗ್ ಕೂಡ ನೆನಪಿನಲ್ಲಿ ಉಳಿಯುತ್ತಿದೆ ಎಂದರು.
ಚಿತ್ರದ ನಾಯಕನಾಗಿ ಭಗತ್ ಆಳ್ವಾ, ನಾಯಕಿಯಾಗಿ ಶ್ವೇತಾ ಡಿ.ಸೋಜ ಅಭಿನಯಿಸಿದ್ದಾರೆ. ಇವರ ಜೊತೆಗೆ ನವೀನ್‌ಕೃಷ್ಣ, ಗೋಪಾಲ್‌ಕೃಷ್ಣ ದೇಶಪಾಂಡೆ, ಅರುಣ್‌ಬಾಲರಾಜ್, ಮುನಿರಾಜ್, ವಿನೋದ್ ಭಾರತಿ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದರು.
ನಾಯಕಿ ಶ್ವೇತ ಡಿ.ಸೋಜ ಮಾತನಾಡಿ, ಇದು ನನ್ನ 3ನೇ ಚಿತ್ರವಾಗಿದೆ. 2023ರಲ್ಲಿ ಖಾಸಗಿ ಪುಟಗಳು ಎಂಬ ಚಿತ್ರದಲ್ಲಿ ನಟಿಸಿದ್ದೆ. ಆನಂತರ ನಟಿಸಿರಲಿಲ್ಲ. ಈಗ ಒಳ್ಳೆಯ ಕಥೆ ಮತ್ತು ಅತ್ಯುತ್ತಮ ನಿರ್ದೆಶಕರು ಸಿಕ್ಕಿದ್ದಾರೆ. ಇದೊಂದು ಒಳ್ಳೆಯ ವಿಷಯಾಧಾರಿತ ಚಿತ್ರವಾಗಿದೆ. ಜಾನಕಿ ಎಂಬ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಈ ಪಾತ್ರ ನನಗೆ ಬ್ರೇಕ್ ನೀಡುತ್ತದೆ ಎಂದರು.