ಕೋಟೆ ನಾಡಿನಲ್ಲಿ ಕಮಲ ಕಿಲ ಕಿಲ: ಗೋವಿಂದ ಕಾರಜೋಳಗೆ ಭರ್ಜರಿ ಗೆಲುವು

ಕಾಂಗ್ರೆಸ್‌ ಪಕ್ಷಕ್ಕೆ ಭರ್ಜರಿ ಮುಖಭಂಗ

ಚಿತ್ರದುರ್ಗ :  ಚಿತ್ರದುರ್ಗ (ಪ.ಜಾತಿ) ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ  ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರಿಗಿಂತ ೪೭೦೬೫ ಮತಗಳ ಅಂತರದಲ್ಲಿ ಅವರು  ಜಯಗಳಿಸಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರು ವಲಸಿಗರಿಗೆ ಮತ್ತು ಹೊಸ ಮುಖಗಳಿಗೆ ಮಣೆ ಹಾಕುತ್ತ ಬಂದಿರುವುದು ಈ ಚುನಾವಣೆಯಲ್ಲೂ ಮುಂದುವರೆದಿದೆ. ಮಾಜಿ ಉಪ ಮುಖ್ಯಮಂತ್ರಿ ಬಾಗಲಕೋಟೆಯ ಮುಧೋಳ ಮೂಲದ ಗೋವಿಂದ ಕಾರಜೋಳ ಕೋಟೆನಾಡಿನಲ್ಲಿ ಪುನಃ ಕಮಲ ಅರಳಿಸಿದ್ದಾರೆ.

ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.   ಅಂಚೆ ಮತ ಏಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮುನ್ನಡೆ ಸಾಧಿಸಿದರೆ, ಮೊದಲ ಸುತ್ತಿನಲ್ಲಿ ಮತ ಏಣಿಕೆಯಲ್ಲಿ ಕಾಂಗ್ರೇಸ್ ಆಭ್ಯರ್ಥಿ ಬಿ.ಎನ್.ಚಂದ್ರಪ್ಪ ಮುನ್ನಡೆ ಸಾಧಿಸಿದರು. ನಂತರ ಎರಡನೇ ಸುತ್ತಿನೊಂದಿಗೆ ಮುನ್ನಡೆ ಸಾಧಿಸುತ್ತ ಹೋದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ, ೧೨, ೧೩, ೧೪ ಹಾಗೂ ೧೫ ನೇ ಸುತ್ತುಗಳಲ್ಲಿ ಮುನ್ನಡೆಯ ಅಂತರದಲ್ಲಿ ಕುಸಿತ ಕಂಡರು.  ತೀವ್ರ ಹಿನ್ನಡೆಯನ್ನು ಅನುಭವಿಸಿದ ಕಾಂಗ್ರೇಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು ಬಿಜೆಪಿಯ ಗೋವಿಂದ ಕಾರಜೋಳ ಅವರನ್ನು ಹಿಂದಿಕ್ಕುವಲ್ಲಿ ವಿಫಲರಾದರು. ನಂತರ ೧೬ ನೇ ಸುತ್ತಿನಲ್ಲಿ ಪುನಃ ಮುನ್ನಡೆಯ ಅಂತರವನ್ನು ಹೆಚ್ಚಿಸಿಕೊಂಡ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ  ೬೮೧೨೧೭ ಮತಗಳನ್ನು ಪಡೆದು, ೪೭೦೬೫  ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿ, ಜಯ ಗಳಿಸಿದರು.

ಪ್ರತಿ ಕೌಟಿಂಗ್ ಹಾಲ್‌ನಲ್ಲಿ ಪ್ರತಿ ಟೇಬಲ್‌ಗೆ ಸಿ.ಸಿ.ಟಿವಿ ಕ್ಯಾಮೆರಾ ಅವಳಡಿಸಿ ಮಾನಿಟರಿಂಗ್ ಮಾಡಲಾಗಿತ್ತು. ಪ್ರತಿ ಟೇಬಲ್‌ಗೆ ಎಣಿಕೆ ಮೈಕ್ರೋ ಅಬಸ್ಸರ್ವರ್, ಎಣಿಕೆ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿತ್ತು. ಮತ ಎಣಿಕೆ ಕಾರ್ಯಕ್ಕೆ ೧೪೧ ಎಣಿಕೆ ಮೈಕ್ರೋ ಅಬ್ಸರ್ವರ್, ೧೪೧ ಜನ ಎಣಿಕೆ ಮೇಲ್ವಿಚಾರಕರು ಹಾಗೂ ೧೫೪ ಜನ ಎಣಿಕೆ ಸಹಾಯಕರನ್ನು ನೇಮಿಸಲಾಗಿತ್ತು.ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಗೋವಿಂದ ಕಾರಜೋಳ ಚಿತ್ರದುರ್ಗದ ಮೂಲಕ ಲೋಕಸಭೆ ಪ್ರವೇಶ ಮಾಡುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ೪೬೫೯೦ ಮತಗಳನ್ನು ಪಡೆಯುವ ಮೂಲಕ ಸತತ ಎರಡನೇ ಅವಧಿಗೆ ಪರಾಭವಗೊಂಡಿದ್ದಾರೆ. ಬಿಜೆಪಿಯ ಗೋವಿಂದ ಕಾರಜೋಳ, ಕಾಂಗ್ರೆಸ್‌ನ ಬಿ.ಎನ್.ಚಂದ್ರಪ್ಪ ಸೇರಿ ೨೦ ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಯ ನಡುವೆ ನೇರ ಹಣಾಹಣಿ ನಡೆದಿತ್ತು. ವಿಜಯದ ಮಾಲೆ ಬಹುತೇಕ ಬಿಜೆಪಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಕೊರಳನ್ನು ಅಲಂಕರಿಸಿದೆ.

……………………………………….
ಕಾಂಗ್ರೇಸ್ ಭಾರೀ ಮುಖಭಂಗ:
ಕಳೆದ ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರಗಳಲ್ಲಿ ೨ ಕಾಂಗ್ರೇಸ್ ೧ ಜೆಡಿಎಸ್ ಹಾಗೂ  ೫ ಬಿಜೆಪಿ ಶಾಸಕರುಗಳು ಇದ್ದಾಗಲೂ ಕೂಡ ಬಿಜೆಪಿಯ  ಎ.ನಾರಾಯಣಸ್ವಾಮಿ ಗೆಲುವು ಸಾಧಿಸಿದ್ದರು. ಆದರೆ ಈ ಭಾರಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದ್ದು, ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ೧ ಮಾತ್ರ ಬಿಜೆಪಿ ಶಾಸಕ ಇದ್ದು, ಉಳಿದ ೭  ಕ್ಷೇತ್ರಗಳಲ್ಲಿ ಕಾಂಗ್ರೇಸ್ ಶಾಸಕರುಗಳು ಇದ್ದರೂ ಕೂಡ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವು ಸಾಧಿಸಿರುವುದು ಕಾಂಗ್ರೇಸ್ ಪಕ್ಷಕ್ಕೆ ಭಾರೀ ಮುಖಭಂಗವನ್ನು ಉಂಟು ಮಾಡಿದೆ.
……………………..


ಚಿತ್ರದುರ್ಗ ಲೋಕಸಭೆಯ ಹಿನ್ನಲೆ :
ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಕಮಲ ಪಡೆ ೨೦೦೯ ಮತ್ತು ೨೦೧೯ರಲ್ಲಿ ಗೆದ್ದಿದೆ. ೧೯೯೬ರಲ್ಲಿ ಜೆಡಿಯು, ೧೯೯೯ರಲ್ಲಿ ಜೆಡಿಎಸ್ ಗೆದ್ದಿದ್ದು ಬಿಟ್ಟರೆ ಉಳಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಇಲ್ಲಿ ಗೆದ್ದಿದ್ದಾರೆ. ೧೯೫೨ರಲ್ಲಿ ಕಾಂಗ್ರೆಸ್ ಪಕ್ಷದಿಂದ ಎಸ್ ನಿಜಲಿಂಗಪ್ಪ ಚಿತ್ರದುರ್ಗ ಕ್ಷೇತ್ರದ ಸಂಸದರಾಗಿದ್ದರು. ಕಾಂಗ್ರೆಸ್ ನಿಂದ ೧೯೭೧ರಲ್ಲಿ ಕೊಂಡಜ್ಜಿ ಬಸ್ಸಪ್ಪ, ೧೯೭೭ ಮತ್ತು ೧೯೮೦ರಲ್ಲಿ ಕೆ. ಮಲ್ಲಣ್ಣ, ೧೯೮೪ರಲ್ಲಿ ಕೆ ಹೆಚ್ ರಂಗನಾಥ್ ಗೆಲವು ಸಾಧಿಸಿದ್ದರೆ ೧೯೮೯, ೧೯೯೧ರಲ್ಲಿ ಸಿ ಪಿ ಮೂಡಲಗಿರಿಯಪ್ಪ ಗೆದ್ದು ಬೀಗಿದ್ದರು. ೧೯೯೬ರಲ್ಲಿ ಜನತಾದಳದಿಂದ ನಿವೃತ್ತ ಐಪಿಎಸ್ ಅಧಿಕಾರಿ ಪಿ.ಕೋದಂಡರಾಮಯ್ಯ ಗೆದ್ದಿದ್ದರು. ೧೯೯೮ರಲ್ಲಿ ಕಾಂಗ್ರೆಸ್ ನಿಂದ ಸಿ ಪಿ ಮೂಡಲಗಿರಿಯಪ್ಪ ಮೂರನೇ ಬಾರಿ ಸಂಸದರಾಗಿದ್ದರು.ಚಿತ್ರದುರ್ಗ ಎಸ್ಟಿ ಮೀಸಲು ಕ್ಷೇತ್ರದಲ್ಲಿ ೧೯೯೯ರಲ್ಲಿ ನಟ ಶಶಿಕುಮಾರ್ ಜೆಡಿಎಸ್ ನಿಂದ ಸಂಸದರಾಗಿ ಆಯ್ಕೆ ಆಗಿದ್ದರು. ೨೦೦೪ರಲ್ಲಿ ಕಾಂಗ್ರೆಸ್ ನಿಂದ ನಿವೃತ್ತ ನ್ಯಾ. ಎನ್ ವೈ ಹನುಮಂತಪ್ಪ ಸಂಸದರಾಗಿದ್ದರು. ಚಿತ್ರದುರ್ಗ ಎಸ್ಸಿ ಮೀಸಲು ಕ್ಷೇತ್ರದಲ್ಲಿ ವಿದೇಶದಿಂದ ಮರಳಿದ್ದ ಜನಾರ್ಧನಸ್ವಾಮಿ ೨೦೦೯ರಲ್ಲಿ ಬಿಜೆಪಿ ಸಂಸದರಾಗಿ ಗೆದ್ದು ಬೀಗಿದ್ದರು. ೨೦೧೪ರಲ್ಲಿ ಚಿಕ್ಕಮಗಳೂರು ಮೂಲದ ಬಿ ಎನ್ ಚಂದ್ರಪ್ಪ ಕಾಂಗ್ರೆಸ್ ನಿಂದ ಸಂಸದರಾಗಿದ್ದರು. ೨೦೧೯ರಲ್ಲಿ ಆನೇಕಲ್ ಮೂಲದ ಎ. ನಾರಾಯಣಸ್ವಾಮಿ ಬಿಜೆಪಿ ಸಂಸದರಾಗಿ ಆಯ್ಕೆ ಆಗಿದ್ದರು.
……………………………..

ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುವೆ: ಗೋವಿಂದ ಕಾರಜೋಳ ಪ್ರತಿಕ್ರಿಯೆ
ಚಿತ್ರದುರ್ಗ :  ಎಲ್ಲರ ಸಲಹೆ ಸೂಚನೆ ಪಡೆದು ಜಿಲ್ಲೆ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ನೂತನ ಬಿಜೆಪಿ ಸಂಸದ ಗೋವಿಂದ ಕಾರಜೋಳ ತಿಳಿಸಿದರು.

ನಗರದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದ ಮತ ಎಣಿಕೆ ಕೇಂದ್ರದಲ್ಲಿ ಫಲಿತಾಂಶ ಘೋಷಣೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ನಾಯಕರು ನಿರ್ಧಾರ ಮಾಡಿ ಅಭ್ಯರ್ಥಿ ಮಾಡಿದ್ದರು. ನನಗೆ ಸಮಯ ಇರಲಿಲ್ಲ ನಾಮಪತ್ರ ಸಲ್ಲಿಕೆಗೆ ಮಾತ್ರ ಕ್ಷೇತ್ರಕ್ಕೆ ಬಂದೆ. ಮೈತ್ರಿ ಕಾರ್ಯಕರ್ತರು ಶಕ್ತಿ ಹಾಕಿ ಗೆಲ್ಲಿಸಿದ್ದಾರೆ’ ಎಂದರು.

‘ಮೋದಿ ಮತ್ತೊಮ್ಮೆ ಪ್ರಧಾನಿ ಆಗೋದು ದೇಶದ ಜನರ ಆಶಯ ಇತ್ತು. ಮೋದಿಯನ್ನು ಮೆಚ್ಚಿ ಮೂರನೇ ಬಾರಿಗೆ ಬಹುಮತ ಕೊಟ್ಟಿದ್ದಾರೆ. ನಮ್ಮ ಪಕ್ಷದ ವರಿಷ್ಠರಿಗೆ, ರಾಜ್ಯ ನಾಯಕರಿಗೆ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

‘ಜನರ ಆಸೆ ಇದು ಜಿಲ್ಲೆಯ ಅಭಿವೃದ್ದಿ ಆಗಬೇಕು ಅಂತ. ಬೇಕು ಬೇಡಿಕೆಗಳ ಅರಿತು ಕೇಂದ್ರದಿಂದ ಏನು ಆಗಬೇಕು ಅದನ್ನು ಮಾಡುತ್ತೇನೆ. ಜಿಲ್ಲೆಗೆ ಹೊಸ ಮುಖ ಆಗಿದ್ದರು ಸಹ ವಿಶ್ವಾಸ ಇಟ್ಟು ಆಯ್ಕೆ ಮಾಡಿದ್ದಾರೆ. ಜಿಲ್ಲೆಯಲ್ಲಿ ನನಗೆ ಸಾಕಷ್ಟು ವಿರೋಧ ಇರಲಿಲ್ಲ. ಪಕ್ಷದ ಅಧ್ಯಕ್ಷರು ಎಲ್ಲರೂ ಸಹಕಾರ ನೀಡಿದರು’ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಜೆಡಿಎಸ್ ಜಿಲ್ಲಾದ್ಯಕ್ಷ ಜಯ್ಯಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.