ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ನಿವಾಸಕ್ಕೆ ಶನಿವಾರ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣಾವನಂದ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಚಂದ್ರಶೇಖರನ್ ಪತ್ನಿ ಕವಿತಾ ಸೇರಿದಂತೆ ಅವರ ಪುತ್ರನೊಂದಿಗೆ ಮಾತುಕತೆ ನಡೆಸಿದ ಶ್ರೀಗಳು, ಚಂದ್ರಶೇಖರನ್ ಸಾವಿಗೆ ನ್ಯಾಯ ಸಿಗಬೇಕು. ನಿಮ್ಮ ಜೊತೆ ನಾವು ಇರುತ್ತೇವೆ. ಸೂಕ್ತ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ತರುತ್ತೇವೆ ಎಂದು ಚಂದ್ರಶೇಖರ್ ಪತ್ನಿ ಕವಿತಾ ಹಾಗೂ ಅವರ ಮಕ್ಕಳಿಗೆ ಸಾಂತ್ವನ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಣಾವನಂದ ಸ್ವಾಮೀಜಿ , ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಭ್ರಷ್ಟಾಚಾರ ಬಹಿರಂಗಪಡಿಸಿ ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು ೧೮೭ ಕೋಟಿ ರೂ. ಹಗರಣ ನಡೆದಿದೆ. ನಿಗಮದ ಹಣವನ್ನು ಬೇರೆ ರಾಜ್ಯಗಳಿಗೆ ಕಳಿಸುವುದು ಎಂದರೆ ಏನರ್ಥ? ಇದು ಇಲಾಖೆಯ ಎಂಡಿಗೆ ಗೊತ್ತಿರಲಿಲ್ಲವೇ? ಅಥವಾ ಸಚಿವರಿಗೆ ಗೊತ್ತಿಲ್ಲದೇ ಹೇಗೆ ನಡೆಯಲು ಸಾಧ್ಯ? ಎಲ್ಲರೂ ಸೇರಿ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ಭ್ರಷ್ಟಾಚಾರಕ್ಕೆ ಚಂದ್ರಶೇಖರ್ ನಂತಹ ಪ್ರಾಮಾಣಿಕ ಅಧಿಕಾರಿಗಳು ಬಲಿಯಾಗಬೇಕಾಯಿತು ಎಂದರು.
ಈ ಘಟನೆಯನ್ನು ಸಿಬಿಐಗೆ ಒಪ್ಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಮತ್ತು ನೊಂದ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವೆಂಕಟೇಶ್ ಮೂರ್ತಿ, ಆರ್. ಪ್ರತಾಪ್, ಶಿವಾಜಿ, ನೂತನ್ ಇದ್ದರು.