ಶಿವಮೊಗ್ಗ : ಖಿನ್ನತೆ ಮತ್ತು ಆತಂಕ ಸಾಮಾನ್ಯ ಮಾನಸಿಕ ಕಾಯಿಲೆಯಾಗಿದೆ. ಇದು ನಮ್ಮ ಕೆಲಸ ಮತ್ತು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಬಿ.ಧರ್ಮಗೌಡರ ಹೇಳಿದರು.
ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕ ಅಸ್ವಸ್ಥತೆಯ ಬಗ್ಗೆ ಅನೇಕರಲ್ಲಿ ಹಲವು ವಿಧದ ತಪ್ಪುನಂಬಿಕೆಗಳು, ಕಲ್ಪನೆಗಳಿವೆ. ಈ ಬಗೆಗಿನ ಪಕ್ಷಪಾತವನ್ನು ನಿವಾರಿಸಿ, ಮಾನಸಿಕ ಅಸ್ವಸ್ಥರನ್ನು ಗೌರವಪೂರ್ವಕವಾಗಿ ನೋಡಿ, ಸೂಕ್ತವಾಗಿ ಸ್ಪಂದಿಸುವ ಕೆಲಸ ಆಗಬೇಕು ಎಂದ ಅವರು, ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕೆಂದರು.
ನಗರದ ಮನೋರೋಗ ತಜ್ಞ ಡಾ|| ಕೆ.ಆರ್.ಶ್ರೀಧರ್ ಮಾತನಾಡಿ, ಮಾನಸಿಕ ಅಶಾಂತಿಯಿಂದ ನೆಮ್ಮದಿಯ ಜೀವನ ನಡೆಸುವುದು ಸಾಧ್ಯವಿಲ್ಲ. ಆದ್ದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ನೆಮ್ಮದಿಯ ಬದುಕನ್ನು ಕಂಡುಕೊಳ್ಳುವಂತೆ ಹೇಳಿದರು.
ಅನೇಕ ಸಂದರ್ಭಗಳಲ್ಲಿ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸದ ಒತ್ತಡದಿಂದ ಆತಂಕ ಹೆಚ್ಚಾಗಿ ವ್ಯಕ್ತಿ ಖಿನ್ನತೆಗೆ ಒಳಗಾಗು ತ್ತಾನೆ. ಇದು ಆತನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಲ್ಲದೇ ಕೆಲಸದ ಅಭದ್ರತೆ, ಅನಿಯಮಿತವಾಗಿ ಮಾಡುವ ಕೆಲಸ, ಏಕತಾನತೆ, ಮತ್ತೆ ಕೆಲ ವೊಮ್ಮೆ ಒಂಟಿತನವೂ ಕೂಡ ಮಾನಸಿಕವಾಗಿ ಬಳಲುವಂತೆ ಮಾಡುತ್ತದೆ ಎಂದರು.
ಆಧುನಿಕ ಹಾಗೂ ಒತ್ತಡದ ಜೀವನ ಶೈಲಿಯಿಂದಾಗಿ ಇಂದು ಪ್ರತಿ ಆರು ಜನರಲ್ಲಿ ಓರ್ವ ವ್ಯಕ್ತಿ ಮಾನಸಿಕ ಕಾಯಿಲೆಯಿಂದ ನರಳುತ್ತಿದ್ದಾನೆ ಎಂದ ಅವರು, ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಉದ್ಯೋಗಿಗಳ ಹಾಜರಾತಿ ಕಡಿಮೆಯಾಗಲಿದೆ. ಇದು ಸಂಸ್ಥೆಯ ಉನ್ನತಿ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ತೊಡಕು ಉಂಟು ಮಾಡಲಿದೆ. ಕೆಲಸದ ಒತ್ತಡ ಪ್ರತಿಬಾರಿಯೂ ಹೆಚ್ಚಾದಾಗ ಪರಿಹಾರ ಕಾಣದೆ ವ್ಯಕ್ತಿ ದುಶ್ಚಟಗಳಿಗೆ ದಾಸನಾಗುತ್ತಾನೆ. ಕೆಲವು ಸಂದರ್ಭಗಳಲ್ಲಿ ಆತ್ಮಹತ್ಯೆಯಂತಹ ದುಷ್ಕೃತ್ಯಗಳಿಗೆ ಮುಂದಾಗುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸೋಮಶೇಖರ್ ಸಿ.ಬಾದಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಡಾ.ಶಿವರಾಮ ಕೃಷ್ಣ, ಜಿ.ಮಧು, ಡಿ.ಎನ್.ಹಾಲಸಿದ್ಧಪ್ಪ, ಡಾ.ರಾಮಪ್ರಸಾದ್, ಡಾ.ನಟರಾಜ್, ಡಾ.ಟಿ.ಬಿ.ಸತ್ಯನಾರಾಯಣ ಮುಂತಾ ದವರು ಉಪಸ್ಥಿತರಿದ್ದರು.