ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ
ಶಿವಮೊಗ್ಗ: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಖೈದಿಗಳ ಮಾನಸಿಕ ಪರಿವರ್ತನೆಗಾಗಿ ವಿಶೇಷ ಯೋಗಾಸನ ತರಬೇತಿ, ವ್ಯಕ್ತಿತ್ವ ವಿಕಸನ ಶಿಬಿರ, ಯೋಗ ಗೀತಾಗಾಯನ ಕಾರ್ಯಕ್ರಮವನ್ನು ಜೂ. 17ರಿಂದ ಜೂ. 21ರವರೆಗೆ ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಹೇಳಿದರು.
ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಕೇಂದ್ರ ಕಾರಾಗೃಹ, ಶಿವಮೊಗ್ಗ, ಜೇಸಿಐ ಶಿವಮೊಗ್ಗ ಶಾಶ್ವತಿ ಘಟಕ, ಪತಂಜಲಿ ಯೋಗ ಕೇಂದ್ರ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ, ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ. ಜೂ. 17ರಂದು ಬೆಳಿಗ್ಗೆ 10-30 ಗಂಟೆಗೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ್ಷಿ ಡಾ: ಅನಿತಾ ಆರ್. ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಪತಂಜಲಿ ರಾಜ್ಯ ಸಮಿತಿ ಸದಸ್ಯ ಜೆಸಿಐ ಶಿವಮೊಗ್ಗ ಅಧ್ಯಕ್ಷ ಜೇಸಿ ನರಸಿಂಹಮೂರ್ತಿ ವಹಿಸುವರು ಎಂದರು.
ಪ್ರತಿ ವರ್ಷದಂತೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹೆಚ್ಚು ಅರ್ಥಬದ್ಧವಾಗಿ ಆಚರಣೆ ಮಾಡಲಾಗುತ್ತಿದೆ. ಹಲವಾರು ವರ್ಷಗಳಿಂದ ಕಾರಾಗೃಹದಲ್ಲಿ ಇರುವ ಖೈದಿಗಳ ಮಾನಸಿಕ ಪರಿವರ್ತನೆಗಾಗಿ ಯೋಗಾಸನ ತರಬೇತಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುತ್ತೇವೆ. ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಕಾರಾಗೃಹ ಸುಧಾರಣಾ ಸಮಿತಿ ಹಾಗೂ ಬೆಂಗಳೂರಿನ ಕಾರಾಗೃಹಗಳ ಇಲಾಖೆಯ ಮುಖ್ಯಸ್ಥರು, ಕೇಂದ್ರ ಕಾರಾಗೃಹದ ಮುಖ್ಯಸ್ಥರು ಅಧೀಕೃತವಾಗಿ ಯೋಗಾಸನ ತರಬೇತಿ ಶಿಬಿರ ಮಾಡಲು ಅನುಮತಿ ನೀಡಿದ್ದಾರೆ. ಜೂ. 17ರಿಂದ ಜೂ. 21ರವರೆಗೆ ಪ್ರತಿ ದಿನ ಬೆಳಿಗ್ಗೆ 7-30 ರಿಂದ 8-30ರವರೆಗೆ ಯೋಗಾಸನ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಘೋಷ್ಠಿಯಲ್ಲಿ ಜೇಸಿಐ ಶಿವಮೊಗ್ಗ ಶಾಶ್ವತಿ ಘಟಕದ ಅಧ್ಯಕ್ಷ ಜೇಸಿ ನರಸಿಂಹಮೂರ್ತಿ, ಜೇಸಿ ಸೆನೆಟರ್ ಶಾಸ್ತ್ರೀ, ಕಲಾವಿದ ಮಾಧವಮೂರ್ತಿ, ಪತಂಜಲಿ ಸಂಸ್ಥೆ ಅಧ್ಯಕ್ಷೆ ಎ.ಹೆಚ್.ಶ್ಯಾಮಲಾ, ನಿರ್ದೇಶಕರಾದ ಸುಶೀಲಭವಾನಿಶಂಕರ್‌ರಾವ್, ಭವಾನಿಶಂಕರ್‌ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಿಸರ ಸಿ.ರಮೇಶ್, ರಾಷ್ಟ್ರಪತಿ ಪದಕ ವಿಜೇತ ಜಿ.ಈ.ಶಿವಾನಂದಪ್ಪ, ಕಲಾವಿದರಾದ ಮಾಧವಮೂರ್ತಿ, ಮಂಜುವಿಶಲ್ ಶೇಟ್, ಪತಂಜಲಿ ಪತ್ರಿಕೆ ವರದಿಗಾರ ಎ.ಪಿ.ಕೋಟ್ರೇಶ್, ಖಜಾಂಚಿ ಜೇಸಿ ಸರಳಾವಾಸನ್, ಜೇಸಿ ಲೋಲಾಕ್ಷಿ, ಜೇಸಿ ಪ್ರೇಮಗೌಡ, ಜೇಸಿ ಮುರುಗೇಶ್, ಜೇಸಿ ಅನ್ನಪೂರ್ಣ, ಜೇಸಿ ಅನಿತಾ ಸಿರಿಲ್ ಉಪಸ್ಥಿತರಿದ್ದರು.