ಪತ್ರಿಕಾಗೋಷ್ಠಿಯಲ್ಲಿ ನಾಟಕದ ನಿರ್ದೇಶಕ ಕಾಂತೇಶ್ ಕದರಮಂಡಲಗಿ ಮಾಹಿತಿ
ಶಿವಮೊಗ್ಗ: ಪ್ರೊ.ನಂಜುಂಡಸ್ವಾಮಿ ಹೋರಾಟ ಗಾಥ ಹೊಂದಿದ ಡಾ.ನಟರಾಜ್ ಹುಳಿಯಾರ್ ಅವರ ಹೊಸ ನಾಟಕ “ಡೈರೆಕ್ಟ್ ಆಕ್ಷನ್’’ ಅನ್ನು ಜೂ.೯ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಾಟಕದ ನಿರ್ದೇಶಕ ಕಾಂತೇಶ್ ಕದರಮಂಡಲಗಿ ತಿಳಿಸಿದರು.
ಶುಕ್ರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಹ್ಯಾದ್ರಿ ರಂಗ ತರಂಗ ಇವರು ಅರ್ಪಿಸುವ ರೈತ ಸಂಘ ಮತ್ತು ಹಸಿರು ಸೇನೆ (ಸಾಮೂಹಿಕ ನಾಯಕತ್ವ) ಇವರ ಸಹಯೋಗದಲ್ಲಿ ಈ ನಾಟಕವು ಭಾನುವಾರ ಸಂಜೆ ೬:೩೦ಕ್ಕೆ ಪ್ರದರ್ಶನಗೊಳ್ಳಲಿದೆ. ಇದಕ್ಕೆ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಸಹಯೋಗವು ಇದೆ. ಗಾಯನ- ಕೆ.ಯುವರಾಜ್, ಸಂಗೀತ-ರಾಘವೇಂದ್ರ ಪ್ರಭು, ಬೆಳಕು-ಮಂಜುನಾಥ ಕೂದುವಳ್ಳಿ, ನಿರ್ದೇಶನ-ಕಾಂತೇಶ ಕದರಮಂಡಲಗಿ, ರಂಗಸಜ್ಜಿಕೆ- ವಿಶ್ವನಾಥ್, ನಿಖಿಲ್, ಪವನ್, ಲೋಕೇಶ, ವಸ್ತ್ರ ವಿನ್ಯಾಸ-ಜಯ.ಕೆ., ನಿರ್ವಹಣೆ-ಬಿ.ಆರ್.ಚಂದ್ರಯ್ಯ, ಎಸ್.ಪಿ.ಶ್ರೀಕಂಠ ಪ್ರಸಾದ್, ಎಂ.ಬಿ.ಕೆಂಚರಾಜ್ ಅವರು ವಹಿಸಲಿದ್ದಾರೆ ಎಂದರು.
ವಿಶ್ವ ಮಾರಾಟ ಸಂಘಟನೆ ಅಸ್ತಿತ್ವಕ್ಕೆ ಬಂದಂದಿನಿಂದ ಭಾರತದ ರೈತ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದಾನೆ. ಇದಕ್ಕೆ ಪುರಾವೆ ಎಂಬಂತೆ ಇತ್ತೀಚೆಗೆ ವರ್ಷಾನುಗಟ್ಟಲೆ ನಡೆದ ರೈತ ಚಳವಳಿ ಮತ್ತು ಸರಕಾರಗಳು ಆತ್ತ ಗನಹರಿಸದೇ ಇರುವುದು. ಆದ್ದರಿಂದ ಪ್ರತಿಯೊಬ್ಬ ರೈತನು ಎಂ.ಡಿ.ನಂಜುಂಡಸ್ವಾಮಿಯವರನ್ನು ತನ್ನಲ್ಲಿ ಆವಾಹನೆ ಮಾಡಿಕೊಳ್ಳುವುದು ಇಂದಿನ ತುರ್ತು. ಈ ಕಾರಣಕ್ಕೆ ಬನ್ನಿ… “ಡೈರೆಕ್ಟ್ ಆಕ್ಷನ್” ನಾಟಕ ನೋಡಿ ಎಂದು ಅವರು ಕರೆ ನೀಡಿದರು.
“ಡೈರೆಕ್ಟ ಆಕ್ಷನ್” ಪದಗಳೇ ಧ್ವನಿಸುವಂತೆ ಆದು ನೇರ ಕ್ರಮ, ಸರಕಾರಿ ವ್ಯವಸ್ಥೆಯಲ್ಲಿ ಯಾವುದೇ ವಿಚಾರಗಳನ್ನ ಕುರಿತು ಆಗ್ರಹಿಸುವಾಗ ಬೇಡಿಕೆ ಸಲ್ಲಿಸಿ, ತಿಳಿಹೇಳಿ, ಮನವಿ ಮಾಡಿ, ಹರತಾಳಗಳ ಮೂಲಕ ಆಗ್ರಹಪಡಿಸಿದರೂ ನ್ಯಾಯ ದೊರಕದಿದ್ದಾಗ ಅನಿವಾರ್ಯವಾಗಿ ಕ್ರಮ ಜರುಗಿಸುವ ಕ್ರಿಯೆಗೆ ಡೈರೆಕ್ಟ್ ಆಕ್ಷನ್ ಅನ್ನುತ್ತೇವೆ. ಈ “ಡೈರೆಕ್ಟ್ ಆಕ್ಷನ್”ನ್ನು ಜಡ್ಡುಗಟ್ಟಿದ, ಕಿವುಡು ವ್ಯವಸ್ಥೆಯ ವಿರುದ್ಧ ಬಳಸಿದ್ದು ವಿಶ್ವ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಆಗಿದ್ದಾರೆ. ಸಂಘಟನೆಗಳ ಮೂಲಕ ಹೋರಾಟದ ಬದುಕನ್ನು ಜೀವನ ಪರ್‍ಯಂತ ರೂಢಿಸಿಕೊಂಡ ಮಂಡ್ಯದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಬದುಕನ್ನ ಈ ನಾಟಕದಲ್ಲಿ ಅನಾವರಣಗೊಳಿಸಲಾಗುವ ಒಂದು ಪ್ರಯತ್ನ ಎಂದು ಅವರು ಹೇಳಿದರು.
ಎಂ.ಡಿ.ನಂಜುಂಡಸ್ವಾಮಿಯವರ ಪಾತ್ರದಲ್ಲಿ ಚಿತ್ರ ನಟ ಡಾ.ಎಚ್.ಎಸ್.ನಾಗಭೂಷಣ ಅವರು ಕಾಣಿಸಿಕೊಳ್ಳಲಿದ್ದು, ಹಳ್ಳಿಯವನಾಗಿ ಬಿ.ವಿ.ತಿಪ್ಪಣ್ಣ, ಶಾಮಣ್ಣನಾಗಿ ನಿಖಿಲ್ ಆರ್. ವಹಿಸಲಿದ್ದಾರೆ. ಇನ್ನಿತರ ಪಾತ್ರಗಳನ್ನು ಸಹ್ಯಾದ್ರಿ ರಂಗ ತರಂಗ ಕಲಾವಿದರು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಂದ್ರೇಗೌಡ, ಜಗದೀಶ್ ನಾಯಕ್, ಸುರೇಶ್ ಉಪಸ್ಥಿತರಿದ್ದರು.