ಶಿವಮೊಗ್ಗ: ನಗರದ ಕಲ್ಲಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಹತ್ತೊಂಭತ್ತನೇ ವಾರ್ಷಿಕೋತ್ಸವದ ಅಂಗವಾಗಿ ಜೂ.20, 21 ಮತ್ತು 22 ರಂದು ಮೂರು ದಿನಗಳ ಕಾಲ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿನಯಾನಂದ ಸ್ವಾಮೀಜಿ ತಿಳಿಸಿದರು.
ಈ ಕಾರ್ಯಕ್ರಮಗಳಲ್ಲಿ ನಾಡಿನ ಪ್ರಸಿದ್ಧ ಪೂಜ್ಯ ಸಂತರು, ಸಾಧಕರು ಆಗಮಿಸಿ ಮಾರ್ಗದರ್ಶನ ಮಾಡಲಿದ್ದಾರೆ. ಜೂ. 20ರ ಬೆಳಿಗ್ಗೆ 10 ಗಂಟೆಗೆ ಕಲ್ಲಗಂಗೂರು ಆಶ್ರಮದ ಪ್ರಾರ್ಥನಾ ಮಂದಿರದಲ್ಲಿ ಯುವ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೂ.21ರ ಸಂಜೆ 5.30 ಕ್ಕೆ ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶಾರದೇಶಾನಂದಜಿ ಮಹಾರಾಜ್ ಅವರು ಶ್ರೀ ಶಾರದಾ ದೇವಿಯವರ ಜೀವನ ಮತ್ತು ಸಾಧನೆಯ ಬಗ್ಗೆ ಪ್ರವಚನ ನೀಡಲಿದ್ದಾರೆ. ಜೂ. 23ರ ಸಂಜೆ 5.30ಕ್ಕೆ ವಿನೋಬನಗರ ವಿಪ್ರ ಟ್ರಸ್ಟ್‌ನಲ್ಲಿ ಜರುಗುವ ಕಾರ್ಯಕ್ರಮದಲ್ಲಿ “ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಸಂದೇಶಗಳು” ಕುರಿತು ಮಾತನಾಡುವವರು.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಪ್ರತಿನಿತ್ಯ ವೇದಘೋಷ, ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಭಗವನ್ನಾಮ ಸಂಕೀರ್ತನ ಸಹ ಏರ್ಪಡಿಸಲಾಗಿದೆ ಎಂದರು.
ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಾತ್ಮ ಬೆಳವಣಿಗೆಯಲ್ಲಿ ತನ್ನದೇ ಆದ ಪಾತ್ರವನ್ನು ವಹಿಸುತ್ತಿರುವ ರಾಮಕೃಷ್ಣ ವಿವೇಕಾನಂದ ಆಶ್ರಮವು 2005 ರಲ್ಲಿ ಪ್ರಾರಂಭವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಹಲವಾರು ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರ ಗೌರವಾದರಗಳನ್ನು ಪಡೆದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಶ್ರಮದ ಗೌರವ ಅಧ್ಯಕ್ಷರಾದ ಚಿಕ್ಕಸ್ವಾಮಿ, ಕರ್ನಾಟಕ ಸಂಘದ ಅಧ್ಯಕ್ಷ ಸುಂದರ್ ರಾಜ್, ಸೂರ್ಯನಾರಾಯಣ, ವೆಂಕಟೇಶ್, ನಾಗೇಂದ್ರ, ಆಶ್ರಮಾದ ಸಂಚಾಲಕ ಶ್ರೀಕಾಂತ್ ಉಪಸ್ಥಿತರಿದ್ದರು.