ಜನ್‌ನರ್ಮ್ ಯೋಜನೆಯಡಿ ಹೆಚ್ಚಾಗಲಿವೆ ನಗರ ಸಾರಿಗೆ ಬಸ್ಸುಗಳು

ಶಿವಮೊಗ್ಗ : ಶೀಘ್ರದಲ್ಲೇ ನಗರಕ್ಕೆ ಜನ್‌ನರ್ಮ್ ಯೋಜನೆಯಡಿಯಲ್ಲಿ ಮಂಜೂರಾಗಿರುವ ಉಳಿದಿರುವ ಬಸ್‌ಗಳ ಸಂಚಾರವನ್ನು ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಇಂದು ನಗರದ ಸೂಡಾ ಕಛೇರಿ ಸಮೀಪ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ಕಛೇರಿ ಉದ್ಘಾಟಿಸಿದ ನಂತರ ಮುಖ್ಯ ಬಸ್ ನಿಲ್ದಾಣದಲ್ಲಿ ನಡೆದ ನಗರ ಸಾರಿಗೆ ಬಸ್ ಘಟಕದ ಶಂಕುಸ್ಥಾಪನೆ ಹಾಗೂ ನಾಲ್ಕು ಹೊಸ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೬೫ ಬಸ್‌ಗಳಲ್ಲಿ ೩೫ ಬಸ್‌ಗಳ ಸಂಚಾರ ಆರಂಭವಾಗಿದೆ. ಉಳಿದ ಬಸ್‌ಗಳ ಸಂಚಾರವನ್ನು ಶೀಘ್ರ ದಲ್ಲಿಯೇ ಆರಂಭಿಸಲಾಗುವುದು ಎಂದರು.
ಶಿವಮೊಗ್ಗ ನಗರಕ್ಕೆ ಕೆಎಸ್‌ಆರ್‌ಟಿಸಿಯ ವಿಭಾಗೀಯ ಕಛೇರಿ ಆರಂಭಿಸಬೇಕೆಂಬ ಬಹುದಿನದ ಬೇಡಿಕೆ ಇಂದು ನನಸಾಗಿದೆ. ಇಲ್ಲಿನ ಮಹಾನಗರ ಪಾಲಿಕೆ ಕೆಎಸ್‌ಆರ್‌ಟಿಸಿಗೆ ಉಚಿತವಾಗಿ ಜಾಗವನ್ನು ನೀಡಿದರೆ ಅಂದೇ ವಿಭಾಗೀಯ ಕಛೇರಿಯ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ೭೬ ಬಸ್ ನಿಲ್ದಾಣಗಳನ್ನು ನಿರ್ಮಿಸಿದ್ದೇವೆ ಎಂದ ಅವರು, ೨೪ ಸಾವಿರ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಒಂದು ಸಾವಿರಕ್ಕೂ ಅಧಿಕ ವಿವಿಧ ಹಂತದ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಉತ್ತಮ ಸೇವೆಯನ್ನು ಒದಗಿಸುತ್ತಿದೆ. ಪ್ರತಿನಿತ್ಯವೂ ಸಹ ಲಕ್ಷಾಂತರ ಜನ ನಮ್ಮ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸು ತ್ತಿದ್ದಾರೆ. ಇದುವರೆಗೂ ಕೆಎಸ್‌ಆರ್‌ಟಿಸಿಗೆ ೧೯೮ ಪ್ರಶಸ್ತಿಗಳು ಲಭಿಸಿವೆ. ೫೩ ಪ್ರಶಸ್ತಿಗಳು ಬಿಎಂಟಿಸಿಗೆ ಲಭಿಸಿದೆ ಎಂದರು.
ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯವನ್ನು ಕಲ್ಪಿಸ ಬೇಕೆಂದು ಇಲ್ಲಿನ ಜನಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ವಿಧಾನಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹಾಗೂ ಶಾಸಕ ಗೋಪಾಲ್‌ಪೂಜಾರಿ, ಶಾಸಕರುಗಳಾದ ಕೆ.ಬಿ.ಪ್ರಸನ್ನಕುಮಾರ್, ಆರ್. ಪ್ರಸನ್ನ ಕುಮಾರ್, ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್, ಮೇಯರ್ ಏಳುಮಲೈ, ಆರ್‌ಟಿಓ ಶಿವರಾಜ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.