ಸೊರಬ: ದೇಶದ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನ ಮಾಡಿದ ಸೇನಾನಿಗಳನ್ನು ಸ್ಮರಿಸುವುದರ ಜೊತೆಗೆ ಸಮಾಜದಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಾಲೂಕು ದಂಡಾಧಿಕಾರಿ ಮಂಜುಳ ಹೆಗಡಾಳ ತಿಳಿಸಿದರು.
ತಾಲೂಕು ಆಡಳಿತದ ವತಿಯಿಂದ ಗುರುವಾರ ರಂಗಮಂದಿರದ ಆವರಣದಲ್ಲಿ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದ ಇತಿಹಾಸದಲ್ಲಿ ಆಗಸ್ಟ್ 15, ಮಹತ್ವದ ಮೈಲಿಗಲ್ಲಾಗಿದ್ದು, ಅಖಂಡ ಭಾರತದಲ್ಲಿ ನಿರ್ಭೀತ ವಾತಾವರಣವನ್ನು ಕಲ್ಪಿಸಿ ಬಾಂಧವ್ಯ ಬೆಸೆಯುವ ಸಂಸ್ಕೃತಿ ಸದಾಭಿವೃದ್ಧಿಗಳ ಸಮಿಲಿತ ಆಗಿದ್ದಲ್ಲದೆ, ಸ್ವಾತಂತ್ರ್ಯ ದೊರೆತಿರುವುದು ಸರ್ವರಿಗೂ ತಾಯಿ ಪ್ರೀತಿಯ ಸಂಕೇತವಾಗಿದೆ ಎಂದರು.
ಮಹಾತ್ಮ ಗಾಂಧೀಜಿ ,ಸುಭಾಷ್ ಚಂದ್ರ ಬೋಸ್, ಡಾ. ಬಿಆರ್ ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಸ್ವ ಹಿತಾಶಕ್ತಿಯನ್ನು ಬದಿಗೊತ್ತಿ ಸ್ವತಂತ್ರ ಭಾರತ ನಿರ್ಮಾಣಕ್ಕೆ ಕಾರಣರಾಗಿದ್ದಾರೆ, ಈ ಸಂದರ್ಭದಲ್ಲಿ ನಾವೆಲ್ಲರೂ ಜಾತಿ ಭೇದ ತೊರೆದು ನಾಡಿನ ನೆಲ ಜಲ ಭಾಷೆ ಗಡಿಯ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಂಡು ಮುಂದಿನ ಜನಾಂಗಕ್ಕೆ ಸಹಕಾರ ನೀಡುವ ಮೂಲಕ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದ ಅವರು ದೇಶದ ಗಡಿಯಲ್ಲಿ ನಮ್ಮನ್ನು ರಕ್ಷಿಸುತ್ತಿರುವ ನಮ್ಮ ವೀರ ಯೋಧರು ಹಾಗೂ ಅನ್ನ ನೀಡುವ ರೈತರಿಗೆ ನಾವೆಲ್ಲರೂ ಚಿರಋಣಿಯಾಗಿರೋಣ ಎಂದರು.
ವಿವಿಧ ಶಾಲಾ ಮಕ್ಕಳಿಂದ ಪತನ ಸಂಚಲನ ನಡೆಯಿತು, ಆರಕ್ಷಕ ಇಲಾಖೆ ಹಾಗೂ ಗೃಹರಕ್ಷಕ ದಳದವರು ಪರೇಡ್ ನಡೆಸಿದರು. ಕಾರ್ಯಕ್ರಮದಲ್ಲಿ ತಾಲೂಕ ಕಾರ್ಯ ನಿರ್ವಹಣಾಧಿಕಾರಿ ಪ್ರದೀಪ್ ಕುಮಾರ್, ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಕೃಷಿ ಅಧಿಕಾರಿ ಕೆಜಿ ಕುಮಾರ್, ಬಿ ಇ ಓ ಪುಷ್ಪ, ಪುರಸಭೆ ಮುಖ್ಯ ಅಧಿಕಾರಿ ಚಂದನ್, ಪಿಎಸ್ಐ ನಾಗರಾಜ್,ಅಗ್ನಿಶಾಮಕ ಅಧಿಕಾರಿ ಮಹಾಬಲೇಶ್ವರ,ಸದಸ್ಯರುಗಳಾದ ಎಂಬಿ ಉಮೇಶ್ , ಮಧು ರಾಯ್ ಜಿ ಶೇಟ್, ಈರೇಶಪ್ಪ, ನಿಂಗರಾಜ್ ಒಡೆಯರ್, ಈಶ್ವರಪ್ಪ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.