ಶಿವಮೊಗ್ಗ: ಹುತಾತ್ಮ ಯೋಧರಿಗೆ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯ ಮತ್ತು ಅವರ ಬಲಿದಾನ ಮತ್ತು ತ್ಯಾಗ ನಮಗೆಲ್ಲರಿಗೂ ಪ್ರೇರಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ್ ಹೆಗಡೆ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ನಗರದ ಸೈನಿಕ ಪಾರ್ಕ್‌ನಲ್ಲಿ ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಶಿವಮೊಗ್ಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೈನ್ಯದಲ್ಲಿ ಹೋರಾಡಿದವರು ಇದ್ದಾರೆ, ನಿವೃತ್ತ ಸೈನಿಕರಿದ್ದಾರೆ, ಅವರ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಪ್ರತಿಯೊಬ್ಬ ಸೈನಿಕನ ಅನುಭವ ಕೇಳಿದಾಗ ರೋಮಾಂಚನವಾಗುತ್ತದೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಬಲಿದಾನ ಶ್ರೇಷ್ಠದಾನವಾಗಿದೆ. ಅವರ ಕುಟುಂಬಗಳಿಗೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಮಾತನಾಡಿ, ದೇಶದ ಜನರಿಗೆ ಇಂದು ಮರೆಯಲಾಗದ ದಿನ ತಮ್ಮ ಶೌರ್ಯ ಪ್ರದರ್ಶನವನ್ನು ಮಾಡಿ ಕಾರ್ಗಿಲ್ ಪ್ರದೇಶವನ್ನು ಶತ್ರುಗಳ ಕೈಯಿಂದ ವಶಕ್ಕೆ ಪಡೆದ ದಿನವಾಗಿದ್ದು, ದೇಶದ ಹೆಮ್ಮೆಯ ಪ್ರತೀಕದ ದಿನವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಕೃಷ್ಣರೆಡ್ಡಿ, ಕರ್ನಲ್ ಜಗದೀಶ್, ಕರ್ನಲ್ ಆನಂದ್‌ರಾವ್, ಉಮೇಶ್ ಜಾಧವ್, ಮತ್ತಿತರರಿದ್ದರು.