ಹುಬ್ಬಳ್ಳಿ: ಮುಖ್ಯಮಂತ್ರಿ ಹಾಗೂ ಉಪಮುಖ್ಯಂತ್ರಿ ಆಯ್ಕೆ ವಿಷಯದಲ್ಲಿ ಅಧಿಕಾರ ಇರೋದು ಶಾಸಕರಿಗೆ. ನಮ್ಮಂತಹ ಧರ್ಮಗುರುಗಳು ಈ ವಿಚಾರದಲ್ಲಿ ಮೂಗು ತೂರಿಸೋದು ಸರಿಯಲ್ಲ ಎಂದು ಕೂಡಲಸಂಗಮದ ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕಾರಣಿಗಳು ಸಲಹೆ ಕೇಳಿದಾಗ ಧರ್ಮಗುರುಗಳು ಸಲಹೆ ಕೊಡಬೇಕು. ಆದ್ರೆ ಇಂತಹವರನ್ನೇ ಸಿಎಂ, ಡಿಸಿಎಂ ಮಾಡಿ ಅಂತ ಹೇಳೋದು ಸರಿ ಅಲ್ಲ. ಯಾರನ್ನಾದರೂ ಸಿಎಂ ಮಾಡಿ, ಡಿಸಿಎಂ ಮಾಡಲಿ. ನಮಗೆ 2A ಮೀಸಲಾತಿ ಕೊಡಲಿ ಎಂದು ಒತ್ತಾಯಿಸಿದ್ದಾರೆ.
ವಿನಯ ಕುಲಕರ್ಣಿ, ಹೆಬ್ಬಾಳಕರ್ ಅವರು ಸಿಎಂಗೆ ಬಹಳ ಸಲ ಹೇಳಿದ್ದಾರೆ. ಆದರೂ ಸಿದ್ದರಾಮಯ್ಯ ಸಭೆ ಕರೆದಿಲ್ಲ. ಕಲಬುರಗಿಯಲ್ಲಿ ಸಮಾವೇಶ ಮಾಡಿದ್ದೆವು, ಅದೂ ಉಪಯೋಗಕ್ಕೆ ಬರಲಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಯತ್ನಾಳ್ ಧ್ವನಿ ಎತ್ತಿದ್ದರು, ನಂತರ ಯಡಿಯೂರಪ್ಪ ಅವರು ಸಭೆ ಕರೆದಿದ್ದರು.
ಬೊಮ್ಮಾಯಿ ಸಹ ಸಿಎಂ ಆಗಿದ್ದಾಗ ಸಭೆ ಕರೆದಿದ್ದರು. ಆದ್ರೆ ಸಿದ್ದರಾಮಯ್ಯ ಅವರು ಇನ್ನೂ ಮೀಟಿಂಗ್ ಕರೆದಿಲ್ಲ. ನಮ್ಮ ಸಮುದಾಯದ ಶಾಸಕರ ಭಾವನೆಗಳನ್ನು ಸರ್ಕಾರ ಅರ್ಥ ಮಾಡಕೊಬೇಕು. ಸಮಾಜವನ್ನು 100 ವರ್ಷದಿಂದ ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ. ನಮ್ಮ ಹೋರಾಟವನ್ನು ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.