ಶಿವಮೊಗ್ಗ : ಕೋವಿಡ್ ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಜನರು ಎಚ್ಚರಿಕೆಯಿಂದ ಇದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ವೈದ್ಯ ಡಾ.ಶ್ರೀನಿವಾಸ ಕರಿಯಣ್ಣ ಹೇಳಿದರು.
ಅವರು ಇಂದು ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಹೊಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಐಸೋಲೇಷನ್ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೋವಿಡ್‍ನಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವವರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಐಸೋಲೇಷನ್ ಕಿಟ್‍ನ್ನು ನೀಡಲಾಗುತ್ತಿದೆ. ಇದರಲ್ಲಿ ಕಾಲ ಕಾಲಕ್ಕೆ ತೆಗೆದುಕೊಳ್ಳುವ ಔಷಧಗಳ ವಿವರವಿದೆ ಮತ್ತು ಅಗತ್ಯಬಿದ್ದರೆ ವೈದ್ಯರ ಸಲಹೆ ಪಡೆಯಲು ಮೊಬೈಲ್ ನಂಬರನ್ನು ಕೂಡ ನಮೂದಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.
ಸಾರ್ವಜನಿಕರು ಇದರ ಜೊತೆಗೆ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.ಮಾಸ್ಕ್ ಧರಿಸಬೇಕು. ವೈದ್ಯರ ಸೂಚನೆಗಳನ್ನು ಪಾಲಿಸಬೇಕು. ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದ ಅವರು ಗ್ರಾಮಾಂತರ ಯುವ ಕಾಂಗ್ರೆಸ್ ಸಮಿತಿ ಈ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಅಗತ್ಯವಿರುವ ಕುಟುಂಬದವರಿಗೆ ಐಸೋಲೇಷನ್ ಕಿಟ್ ನೀಡಲಾಯಿತು. ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನಿತಿನ್, ಹನುಮಂತು, ಗ್ರಾ.ಪಂ.ಮಾಜಿ ಅಧ್ಯಕ್ಷ ಉಮೇಶ್, ನಾಗರಾಜ್, ತಾ.ಪಂ.ಸದಸ್ಯ ತಿಪ್ಪೇಶ್ ರಾವ್, ನಾಗೇಶ್, ಕರಿಯಣ್ಣ, ಸಚಿನ್ ಸೇರಿದಂತೆ ಹಲವರಿದ್ದರು.