ಬಂಜಾರಭವನ ಕಟ್ಟಡ ನಿರ್ಮಾಣದಲ್ಲಿ ಅಕ್ರಮ: ತನಿಖೆಗೆ ಮನವಿ

ಶಿವಮೊಗ್ಗ: ನಗರದ ಬಾಲರಾಜ್‌ ಅರಸ್‌ ರಸ್ತೆಯಲ್ಲಿರುವ ಜಿಲ್ಲಾ ಬಂಜಾರ ಭವನದ ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಅನುಮಾನವಿದ್ದು, ಸರಕಾರ ತಾಂತ್ರಿಕ ತನಿಖೆ ಮಾಡಿಸಿ ಅಂದಾಜು ಪಟ್ಟಿ, ವಿನ್ಯಾಸ ಇತ್ಯಾದಿಗಳ ವಿಚಾರದಲ್ಲಿ ಸತ್ಯಾಂಶ ತಿಳಿಸಬೇಕೆಂದು ಜಿಲ್ಲಾ ಬಂಜಾರ ಸಂಘದ ಅಜೀವ ಸದಸ್ಯರುಗಳು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರಿಗೆ ಮನವಿ ಮಾಡಿದ್ದಾರೆ.


ಸಚಿವರನ್ನು ಭೇಟಿ ಮಾಡಿದ್ದ ಮುಖಂಡರುಗಳು ೧೩ ಕೋಟಿ ರೂ.ಗಳನ್ನು ಬಂಜಾರ ಭವನ ನಿರ್ಮಾಣ ಮಾಡಿದೆ. ಸರಕಾರದಿಂದ ಯಾವ ಯಾವ ಅನುದಾನ ನೀಡಲಾಗಿದೆ ಎಂಬ ಬಗ್ಗೆ ಸಂಘದವರು ಮಾಹಿತಿ ನೀಡುತ್ತಿಲ್ಲ. ಕಾರ್ಯಕಾರಿ ಸಮಿತಿಯವರು ವಿಷಯ ಮುಚ್ಚಿಡುತ್ತಿರುವುದರಿಂದ ಕಟ್ಟಡ ನಿರ್ಮಾಣದಲ್ಲಿ ಭ್ರಷ್ಟಾಚಾರ ಆಗಿರುವ ಬಗ್ಗೆ ಅನುಮಾನವಿದೆ. ತಾಂಡಾಗಳು ಮತ್ತು ಸಮುದಾಯದ ಮುಖಂಡರುಗಳು ೨ ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಎಲ್ಲವೂ ಪಾರದರ್ಶಕವಾಗಿಲ್ಲ. ಹಲವು ಬಾರಿ ಮಾಹಿತಿ ಕೇಳಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸರಕಾರ ಬಂಜಾರ ಭವನ ಕಾಮಗಾರಿ ಬಗ್ಗೆ ತಾಂತ್ರಿಕ ಸಮಿತಿಯಿಂದ ಉನ್ನತಮಟ್ಟದ ತನಿಖೆ ನಡೆಸಬೇಕೆಂದು ಅವರುಗಳು ಮನವಿಯಲ್ಲಿ ತಿಳಿಸಿದ್ದಾರೆ.