ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಪರ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದ್ದರು.
ಯಡಿಯೂರಪ್ಪ ಅವರನ್ನು ಬಂಧಿಸುವಂತೆ ನಿರ್ದೇಶನ ಕೋರಿ ಪೋಕ್ಸೋ ಪ್ರಕರಣದ ಸಂತ್ರಸ್ತೆಯ ಸಹೋದರ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಮಾಡಿತ್ತು. ಇದರ ಬೆನ್ನಲ್ಲೇ, ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಯಡಿಯೂರಪ್ಪನವರು ತನಿಖಾ ತಂಡದ ಎದುರು ಜೂ.17 ರಂದು ಹಾಜರಾಗುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಬಂಧಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ನೋಟಿಸ್ ಕೊಟ್ಟರೂ ಬಿಎಸ್‌ವೈ ವಿಚಾರಣೆಗೆ ಹಾಜರಾಗಲಿಲ್ಲ. ಆದ್ದರಿಂದ ಅವರನ್ನು ಬಂಧಿಸಲು ನಿರ್ದೇಶಿಸಬೇಕು ಎಂದು ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ನಾಯಕ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೊಡಿಸುವಂತೆ ಕೋರಿ ಬಾಲಕಿ ಮತ್ತು ಆಕೆಯ ತಾಯಿ ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದರು. ಈ ವೇಳೆ ರೇಪ್ ಆಗಿದೆಯೋ ಹೇಗೆ ಎಂಬುದನ್ನು ಚೆಕ್ ಮಾಡುವ ನೆಪದಲ್ಲಿ 17 ವರ್ಷದ ಬಾಲಕಿಯನ್ನು ರೂಮಿನಲ್ಲಿ ಕೂಡಿ ಹಾಕಿಕೊಂಡು ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರಕರಣದ ರದ್ದು ಕೋರಿ ಮಾಜಿ ಸಿಎಂ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ದೂರಿನಲ್ಲಿ ಯಾವುದೇ ಅಪರಾಧದ ಅಂಶ ಕಂಡುಬರದ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ಇನ್ನು ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಬಾಲಕಿಯ ಸಹೋದರನ ಮನವಿ ಮೇರೆಗೆ ವಕೀಲ ಎಸ್ ಬಾಲನ್ ಅವರು ಜೂನ್ 10ರಂದು ಅರ್ಜಿ ಸಲ್ಲಿಸಿದ್ದರು.