ಶಿವಮೊಗ್ಗ : ಬುಧವಾರ ಬೆಳಗ್ಗೆ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‍ಐ ಭಾರತಿ ಅವರು ನಗರದ ಕುವೆಂಪು ರಸ್ತೆ, ಹೆಲಿಪ್ಯಾಡ್ ವೃತ್ತ, ಆದಿಚುಂಚನಗಿರಿ ಕ್ರಾಸ್, ನಂದಿ ಪೆಟ್ರೋಲ್ ಬಂಕ್ ಹತ್ತಿರ ಶಾಲಾ ವಾಹನಗಳ ತಪಾಸಣೆ ನಡೆಸಿದರು.
ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳಾದ ಆರ್.ಸಿ (ನೋಂದಣಿ ಪ್ರಮಾಣ ಪತ್ರ), ಚಾಲ್ತಿಯಲ್ಲಿರುವ ವಿಮಾ ಪತ್ರ, ಇತ್ತೀಚಿನ ಎಮಿಷನ್ ಟೆಸ್ಟ್ ಪ್ರಮಾಣ ಪತ್ರ, ಚಾಲಕರಿಗೆ ಸಂಬಂಧಿಸಿದ ದಾಖಲಾತಿಗಳಾದ ಡಿ.ಎಲ್ (ಚಾಲನಾ ಪರವಾನಿಗೆ), ಬ್ಯಾಡ್ಜ್ ಹಾಗೂ ಇತರ ದಾಖಲಾತಿಗಳ ಪರಿಶೀಲನೆಯನ್ನು ನಡೆಸಿದ್ದು, ಅಪಘಾತದ ಸಂದರ್ಭದಲ್ಲಿ ತುರ್ತು ಉಪಯೋಗಕ್ಕಾಗಿ ವಾಹನದಲ್ಲಿ ಪ್ರಥಮಾ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಿದರು.
ನಂತರ ಶಾಲಾ ವಾಹನಗಳ ಚಾಲಕರುಗಳಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮಾಹಿತಿ ನೀಡಿ, ಮಳೆಗಾಲವಾಗಿರುವುದರಿಂದ ರಸ್ತೆಯ ತಿರುವುಗಳಲ್ಲಿ ವಾಹನಗಳನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡದೇ, ವೇಗದ ಮಿತಿಯಲ್ಲಿಯೇ ವಾಹನಗಳನ್ನು ಚಾಲನೆ ಮಾಡುವಂತೆ ಮತ್ತು ಮಧ್ಯಪಾನ ಮಾಡಿ ಅಥವಾ ಯಾವುದೇ ನಶೆಯಲ್ಲಿ ವಾಹನ ಚಾಲನೆ ಮಾಡದಂತೆ ಮತ್ತು ಪ್ಯಾಸೆಂಜರ್ ಓವರ್ ಲೋಡ್ ಮಾಡದೇ ಕಡ್ಡಾಯವಾಗಿ ವಾಹನದಲ್ಲಿ ನಿಗದಿಪಡಿಸಿದ ಆಸನಗಳಲ್ಲಿ ಮಾತ್ರ ಮಕ್ಕಳನ್ನು ಕೂರಿಸಿಕೊಂಡು ಹೋಗುವಂತೆ ಸೂಚನೆಗಳನ್ನು ನೀಡಿದರು.