ಶಿವಮೊಗ್ಗ: ಅಪಘಾತ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೂಳೆಬೈಲು ನಿವಾಸಿಗಳು ಗುರುವಾರ ಊರಗಡೂರು ಬೈಪಾಸ್ ರಸ್ತೆಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಸೂಳೆಬೈಲ್ ಬೈಪಾಸ್ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ. ರಸ್ತೆಯ ಆಸುಪಾಸಿನಲ್ಲಿ ಸಾವಿರಾರು ಮನೆಗಳಿವೆ. ಮತ್ತೂರು, ಕಡೆಕಲ್, ಹಾಲಲಕ್ಕವಳ್ಳಿ ಮುಂತಾದ ಗ್ರಾಮಗಳ ಜನ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಇಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿವೆ ಎಂದು ದೂರಿದರು.
ಇಲ್ಲಿನ ಸದರಿ ಕ್ರಾಸ್ ಬಳಿ ಮದಾರಿಪಾಳ್ಯ ಸಂಪರ್ಕ ಕಲ್ಪಿಸುವ ರಸ್ತೆ ಇದ್ದು, ಬೈಪಾಸ್ ರಸ್ತೆ ರಾಷ್ಟ್ರೀಯ ಹೆದ್ದಾರಿಯಾದ ನಂತರ ಅಪಘಾತಗಳು ಹೆಚ್ಚಾಗಿ ಜೀವ ಹಾನಿ ಕೂಡ ಸಂಭವಿಸುತ್ತಿವೆ. ಆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಅಲ್ಲದೇ ಈ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಈ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಬೇಕು. ಅಪಘಾತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಅಬ್ದುಲ್ ರಹೀಂ, ಸನಾವುಲ್ಲಾ, ರುಹಿತ್, ಮುಜೀಬ್, ಸಾದಿಕ್, ಯಾಸಿನ್, ರಹಮತ್ ಮೊದಲಾದವರಿದ್ದರು.