ಶಿವಮೊಗ್ಗ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಎರಡು ಸಾವಿರದಂತೆ 3 ಕಂತುಗಳಲ್ಲಿ ವಾರ್ಷಿಕ ಆರು ಸಾವಿರ ರೂ.ಗಳನ್ನು ನೀಡುತ್ತಿದೆ. ಇದನ್ನು ಹೆಚ್ಚಿಸಬೇಕು. ಪ್ರತಿ ಕಂತಿಗೆ 10 ಸಾವಿರದಂತೆ ಮೂರು ಕಂತುಗಳಿಗೆ ರೂ.30 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.
ರೈತರು ಅತಿವೃಷ್ಠಿ ಮತ್ತು ಅನಾವೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮತ್ತು ಜೀವ ಹಾನಿಗೆ ಒಳಗಾಗುತ್ತಿದ್ದಾರೆ. ದೇಶಾದಾದ್ಯಂತ ಇದುವರೆಗೂ 11 ಕೋಟಿಗೂ ಹೆಚ್ಚು ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹಾಗಾಗಿ ಈ ಮೊತ್ತವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಹತ್ತಾರು ಬಹುಕೋಟಿ ಉದ್ಯಮಿಗಳು ನಷ್ಟಕ್ಕೊಳಗಾಗಿದ್ದಾರೆ ಎಂಬ ಕಾರಣಕ್ಕಾಗಿ ಸಾವಿರಾರು ಕೋಟಿ ರೂ. ಸಾಲವನ್ನು ಸಾರಸಗಟ್ಟಾಗಿ ಮನ್ನಾ ಮಾಡಿದ್ದಾರೆ. ಆದರೆ ರೈತರಿಗೆ ಪರಿಹಾರ ನೀಡಲು ಮುಂದೆ ಬರುತ್ತಿಲ್ಲ. ಇದು ಆತಂಕಕಾಗಿ ವಿಷಯವಾಗಿದೆ. ಸಾವಿರಾರು ರೈತರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರೇ ಈ ದೇಶದ ಬೆನ್ನೆಲುಬು ಆಗಿದ್ದಾರೆ. ಆಗಾಗಿ ಮುಂದಿನ ಲೋಕಸಭಾ ಬಜೆಟ್‍ನಲ್ಲಿ ಈ ಕಿಸಾನ್ ಸಮ್ಮಾನ್ ಯೋಜನೆಯ ಮೊತ್ತವನ್ನು ಹೆಚ್ಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಟ್ರಸ್ಟಿನ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಎಸ್.ಪಿ.ಶೇಷಾದ್ರಿ, ಎಸ್.ವಿ.ರಾಜಮ್ಮ, ಸುವರ್ಣ ನಾಗರಾಜ್, ನರಸಿಂಹಮೂರ್ತಿ, ಪ್ರೊ. ಹೆಚ್.ಕಲ್ಲನ, ಜನಮೇಜಿರಾವ್, ಎಲ್.ಆದಿಶೇಷ, ಬಿ.ಟಿ.ಸೋಮಶೇಖರಯ್ಯ, ಟಿ.ಹೆಚ್.ಬಾಬು, ಶಂಕರನಾಯ್ಕ ಇದ್ದರು.