ಶಿವಮೊಗ್ಗ : ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡಲು ಸರ್ಕಾರ ನೇಮಿಸಿರುವ ಸಮಿತಿಯ ಸದಸ್ಯರು ಅಧಿಕಾರಿಗಳೊಂದಿಗೆ ವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ. ಎಸ್. ಚಂದ್ರಭೂಪಾಲ್ ತಿಳಿಸಿದರು.
ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರಕ್ಕೆ ನೇಮಕವಾದ ಜಿಲ್ಲಾ, ತಾಲ್ಲೂಕು ಮಟ್ಟದ ಅಧ್ಯಕ್ಷರು, ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಜನತೆಗೆ 5 ಗ್ಯಾರಂಟಿಗಳ ಭರವಸೆಯನ್ನು ನೀಡಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಹಂತ ಹಂತವಾಗಿ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದು ಬಡವರು, ಕೂಲಿ ಕಾರ್ಮಿಕ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇನ್ನೂ ಪರಿಣಾಮಕಾರಿಯಾಗಿ ಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಉದ್ದೇಶದಿಂದ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷಾನ ಪ್ರಾಧಿಕಾರವನ್ನು ನೇಮಕ ಮಾಡಿದೆ ಎಂದರು.
ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸದಸ್ಯರ ಜವಾಬ್ದಾರಿ ಅತ್ಯಂತ ಪ್ರಮುಖವಾಗಿದ್ದು ಈ ಯೋಜನೆಯಲ್ಲಿ ತಾಂತ್ರಿಕ ಹಾಗೂ ಇತರೆ ಸಮಸ್ಯೆಗಳಿಂದ ಇನ್ನೂ ಯಾರಿಗೆ ಸೌಲಭ್ಯವನ್ನು ಪಡೆಯಲು ಸಾಧ್ಯವಾಗಿಲ್ಲ ಅವರನ್ನು ಗುರುತಿಸಿ ಸೌಲಭ್ಯ ನೀಡಬೇಕು. ಜನರಲ್ಲಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ ತಲುಪಿಸುವ ಕಾರ್ಯ ಸಮಿತಿಯಿಂದ ಆಗಬೇಕು. ಸದಸ್ಯರು ಅಧಿಕಾರಿಗಳ ಜೊತೆಯಲ್ಲಿ ವಿಶ್ವಾಸದಿಂದ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದರು.
ರಾಜ್ಯದಲ್ಲಿ ಆರ್ಥಿಕ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು, ಇಡೀ ದೇಶದಲ್ಲಿ ಈ ಯೋಜನೆ ಮಾದರಿಯಾಗಿದೆ. ಬಡವರಿಗೆ ಯೋಜನೆಗಳನ್ನು ತಲುಪಿಸುವಲ್ಲಿ ಸದಸ್ಯರ ಪಾತ್ರ ಅಪಾರವಾಗಿದೆ. ಗ್ಯಾರಂಟಿ ಯೋಜನೆ ನಿಲ್ಲುತ್ತದೆ ಎಂದು ಸುಳ್ಳು ವದಂತಿ ಹರಿದಾಡುತ್ತಿದ್ದು ಯಾರು ಕೂಡ ಈ ಸುಳ್ಳು ಸುದ್ದಿಗೆ ಕಿವಿಗೊಡಬಾರದು ಎಂದರು.
ಈ ವೇಳೆ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರಕ್ಕೆ ನೇಮಕವಾದ ನೂತನ ಸದಸ್ಯರಿಗೆ ತಾಲ್ಲೂಕು ಆಡಳಿತದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಶಿವಮೊಗ್ಗ ತಹಶೀಲ್ದಾರ್ ಗಿರೀಶ್, ಶಿವಮೊಗ್ಗ ತಾಲ್ಲೂಕು ಇಓ ಅವಿನಾಶ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಮಧು. ಹೆಚ್.ಎಂ, ಸದಸ್ಯರಾದ ದೇವಿಕುಮಾರ್, ನಿಖಿಲ್ ಮೂರ್ತಿ, ಕುಮಾರೇಶ್, ಮಹೇಶ್ವರಪ್ಪ, ಭಾರತಿ, ಮಲ್ಲಿಕಾರ್ಜುನ್, ಮೋಹನ್, ಎಲಿಜಬೆತ್ ಗ್ಲಾಡೀಸ್, ಅಜೀಜ್ ಉಲ್ಲಾಖಾನ್, ವಾಗೀಶ್, ಜಗದೀಶ್ವರ, ಬಸವರಾಜ್, ಇರ್ಫಾನ್, ಚಾಂದ್ ಪಾಷ ಹಾಗೂ ತಾಲೂಕ್ ಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
…………………………………………………………………..
ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ. ಯೋಜನೆಯನ್ನು ಅನುಷ್ಟಾನ ಮಾಡುವುದು ಹಾಗೂ ಜನರಲ್ಲಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ಗುರಿಯಾಗಿದೆ.
– ಸಿ.ಎಸ್.ಚಂದ್ರಭೂಪಾಲ್, ಜಿಲ್ಲಾ ಮಟ್ಟದ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ