ಶಿವಮೊಗ್ಗ : ಗ್ರಾಮ ಮಟ್ಟದಲ್ಲಿ ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಟ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ತಿಳಿಸಿದರು.
ಇಂದು ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಸಂಬಂಧ ಜಿಲ್ಲಾ ಮಟ್ಟದ ಕಾವಲು ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ವರ್ಷ ೨೦೦ ಮಹಿಳೆಯರ ನಾಪತ್ತೆ ಪ್ರಕರಣ ವರದಿಯಾಗಿದ್ದು, ೧೬೯ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಈ ಅವಧಿಯಲ್ಲಿ ೭೮ಮಕ್ಕಳು ನಾಪತ್ತೆಯಾಗಿದ್ದು, ೭೦ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಪ್ರಸ್ತುತ ವರ್ಷ ಇದುವರೆಗೆ ೬೨ಮಕ್ಕಳ ನಾಪತ್ತೆ ಪ್ರಕರಣ ವರದಿಯಾಗಿದ್ದು ೫೧ಮಂದಿಯನ್ನು ಪತ್ತೆ ಹಚ್ಚಲಾಗಿದೆ ಎಂದರು.
ಇನ್ನೂ ೧೧ಮಕ್ಕಳು ಮಿಸ್ಸಿಂಗ್ ಇದ್ದಾರೆ. ಆದರೆ ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿರುವುದಕ್ಕೂ ಮಕ್ಕಳ ಕಲ್ಯಾಣ ಸಮಿತಿ ಬಳಿ ಇರುವ ಸಂಖ್ಯೆಗೂ ತಾಳೆಯಾಗುತ್ತಿಲ್ಲ. ಇದಕ್ಕಾಗಿ ಪ್ರತಿ ತಿಂಗಳು ಪೊಲೀಸ್, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಭೆ ಸೇರಿ ಪ್ರಕರಣಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಜಿ.ಪಂ. ಸಿಇಓ ಮಾತನಾಡಿ, ಗ್ರಾಮ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ರಚಿಸಲಾಗಿರುವ ಕಾವಲು ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ತಮ್ಮ ವ್ಯಾಪ್ತಿಯಲ್ಲಿರುವ ಮಹಿಳೆಯರು ಹಾಗೂ ಮಕ್ಕಳ ಕುರಿತಾಗಿ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಈಗಾಗಲೇ ಸೂಚನೆ ನೀಡಿದ್ದರೂ ಬಹುತೇಕ ಗ್ರಾಮ ಪಂಚಾಯತ್‌ಗಳಲ್ಲಿ ಮಾಹಿತಿಯನ್ನು ಇಟ್ಟಿರುವುದಿಲ್ಲ. ನಿಗದಿತ ಅವಧಿಯೊಳಗೆ ದಾಖಲೆಗಳನ್ನು ಸರಿಪಡಿಸದಿದ್ದರೆ ಆಯಾ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು ಎಚ್ಚರಿಕೆ ನೀಡಿದರು.