ಹಾವೇರಿ: ನಿಂತಿದ್ದ ಲಾರಿಯೊಂದಕ್ಕೆ ವೇಗವಾಗಿ ಬರುತ್ತಿದ್ದ ಟೆಂಪೊ ಟ್ರಾವಲರ್ ಡಿಕ್ಕಿ ಹೊಡೆದು 13 ಮಂದಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಹಿಂಬದಿಯಿಂದ ಲಾರಿಗೆ ಟಿಟಿ ವಾಹನವೊಂದು ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ 13 ಜನರು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ನಲ್ಲಿ ಇಂದು(ಶುಕ್ರವಾರ) ಬೆಳಗ್ಗೆ ನಡೆದಿದೆ.
ಮೃತರೆಲ್ಲರೂ ಶಿವಮೊಗ್ಗ ಮೂಲದ ನಿವಾಸಿಗಳು ಎಂಬ ಮಾಹಿತಿ ಇದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ.
ಟಿಟಿಯಲ್ಲಿ ಪ್ರಯಾಣಿಸುತ್ತಿದ್ದ ಭದ್ರಾವತಿ ತಾ.ಎಮ್ಮಿಹಟ್ಟಿ ಗ್ರಾಮದ ಪರಶುರಾಮ್, ಭಾಗ್ಯ, ನಾಗಶ್ರೀ, ವಿಶಾಲಾಕ್ಷಿ, ಮಾನಸ, ಮಂಜುಳಾ, ರೂಪಾ, ಸುಭದ್ರಾ ಬಾಯಿ, ಪುಣ್ಯಾ ಬಾಯಿ , ಅರ್ಪಿತಾ, ಆದರ್ಶ ಮೃತಪಟ್ಟದ್ದಾರೆ.
ಮೃತರು ಸವದತ್ತಿಗೆ ದೇವರ ದರ್ಶನಕ್ಕೆಂದು ತೆರಳಿದ್ದರು. ಮರಳಿ ಊರಿಗೆ ವಾಪಸ್ ಆಗುತ್ತಿದ್ದಾಗ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಒಟ್ಟು 16 ಮಂದಿ ಟಿಟಿ ವಾಹನದಲ್ಲಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶು ಕುಮಾರ್ ರಿಯಾಕಡ, ಬ್ಯಾಡಗಿ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.