ಬೆಂಗಳೂರು: “ಇಡೀ ರಾಜ್ಯವೇ ಖುಷಿ ಪಡೋ ಸುದ್ದಿ” ಎಂದು ಹೇಳಿ ಪ್ರಖ್ಯಾತಿ ಪಡೆದಿದ್ದ ಸುದ್ದಿ ವಾಹಿನಿಯ ಮಾಜಿ ನಿರೂಪಕಿ ಮತ್ತು “ಗಿಚ್ಚಿ ಗಿಲಿಗಿಲಿʼʼ ಶೋ ಸ್ಪರ್ಧಿ ದಿವ್ಯ ವಸಂತ ಮೇಲೆ ಹನಿಟ್ರ್ಯಾಪ್ ಸುಲಿಗೆ ಆರೋಪ ಕೇಳಿಬಂದಿತ್ತು. ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕಾಣೆಯಾಗಿದ್ದ ದಿವ್ಯರನ್ನು ರಾಜ್ಯ ಪೊಲೀಸರು ಕೇರಳದಲ್ಲಿ ಬಂಧನ ಮಾಡಿದ್ದಾರೆ.
ಬೆಂಗಳೂರಿನ ಇಂದಿರಾನಗರದಲ್ಲಿರುವ ಸ್ಪಾ ಮಾಲೀಕನಿಗೆ ಮಸಾಜ್ ಪಾರ್ಲರ್ ಹೆಸರಿನಲ್ಲಿ ಬೆದರಿಕೆ ಹಾಗೂ ಸುಲಿಗೆ ಯತ್ನ ನಡೆಸಿದ ಪ್ರಕರಣದಲ್ಲಿ ಸಿಲುಕಿರುವ ದಿವ್ಯ ಈ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ದಿವ್ಯ ವಸಂತ ಕೇರಳದಲ್ಲಿ ಇರುವ ಸುಳಿವು ಪಡೆದ ರಾಜ್ಯ ಪೊಲೀಸರು ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು. ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸರು ದಿವ್ಯರನ್ನು ಬಂಧಿಸಿ ಕರೆ ತಂದಿದ್ದಾರೆ.
ಇಂದಿರಾನಗರದ ಟ್ರೀ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಮಾಲೀಕನನ್ನು ಒಳಗೊಂಡ ಹಲವರನ್ನು ಬ್ಲ್ಯಾಕ್‌ಮೇಲ್ ಮಾಡಿರುವ ಸುಲಿಗೆ ಪ್ರಕರಣದಲ್ಲಿ ದಿವ್ಯ ವಸಂತ ಆರೋಪಿಯಾಗಿದ್ದಾರೆ. ಟ್ರೀ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಗೆ ತಮ್ಮ ಗುಂಪಿಗೆ ಸೇರಿದ ಯುವತಿಯನ್ನು ಕೆಲಸಕ್ಕೆ ಸೇರಿಸಿ ಈ ತಂಡ ಸುಲಿಗೆಗೆ ಯತ್ನಿಸಿತ್ತು ಎನ್ನಲಾಗಿದೆ.
ರಾಜ್‌ನ್ಯೂಸ್ ಸುದ್ದಿವಾಹಿನಿ ಸಿಇಓ ವೆಂಕಟೇಶ್ ರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ತಂಡವು ‘ಸ್ಪೈ ರೀಸರ್ಚ್ ಟೀಂ’ ಹೆಸರಿನ ವಾಟ್ಸಪ್ ಗ್ರೂಪ್ ಮೂಲಕ ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.