ಬೆಂಗಳೂರು: ಜಿಲ್ಲಾ ನ್ಯಾಯಾಲಯವೊಂದು ಪೋಕ್ಸೋ ಕಾಯ್ದೆಯಡಿ ವಿಧಿಸಿದ ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಕೆ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಸಿ ಎಂ ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ ಚಿಕ್ಕಮಗಳೂರಿನ ಆರೋಪಿಯ ಮನವಿಯನ್ನು ಅಂಗೀಕರಿಸಿದೆ.
ಆರೋಪಿಯು ಅಪ್ರಾಪ್ತ ಬಾಲಕಿ ಜೊತೆ ಸಲುಗೆ ಬೆಳೆಸಿ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸಿದ್ದನು. ತನ್ನ ಮಗಳು ಗರ್ಭಿಣಿಯಾಗಿರುವುದನ್ನು ತಿಳಿದ ಸಂತ್ರಸ್ತೆಯ ತಾಯಿಯು ದೂರು ದಾಖಲಿಸಿದ್ದರು. ತನಿಖೆಯಲ್ಲಿ ಆರೋಪ ದೃಡಪಟ್ಟ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಘಟನೆಯು ೨೦೧೬ರಲ್ಲಿ ನಡೆದಿರುತ್ತದೆ.
2018ರಂದು ಚಿಕ್ಕಮಗಳೂರಿನ ವಿಶೇಷ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಆರೋಪಿಯು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದನು. ವಿಶೇಷ ನ್ಯಾಯಾಲಯವು ಗರಿಷ್ಠ ಜೀವಾವಧಿ ಶಿಕ್ಷೆಯನ್ನು ವಿಧಿಸಲು ಸಾಕಷ್ಟು ಕಾರಣಗಳನ್ನು ಒದಗಿಸಿಲ್ಲ ಎಂದು ತೀರ್ಮಾನಿಸಿ, ಶಿಕ್ಷೆಯನ್ನು 10 ವರ್ಷಗಳ ಜೈಲು ಶಿಕ್ಷೆಯಾಗಿ ವಿಧಿಸಿದೆ.