ಶಿವಮೊಗ್ಗ : ಲವ್ ಜಿಹಾದ್ ಪ್ರಕರಣಗಳಿಗೆ ಮುತಾಲಿಕ್ ಅವರು ವಿವಿಧೆಡೆ ಸಹಾಯವಾಣಿ ಸ್ಥಾಪಿಸಿರುವ ಹಾಗೆಯೇ ಶಿವಮೊಗ್ಗ ನಗರದಲ್ಲಿ ಇಂತಹ ಸಹಾಯವಾಣಿಯ ಒಂದು ಶಾಖೆಯನ್ನು ಸ್ಥಾಪಿಸಲು ಅವರಿಗೆ ಸೂಚಿಸುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ಪ್ರಕರಣಗಳಿಗೆ ಮುತಾಲಿಕ್ ಅವರ ಸಹಾಯವಾಣಿ ಸ್ಥಾಪಿಸಿರುವುದರ ಕುರಿತ ಪ್ರಶ್ನೆಗೆ ಉತ್ತರಿಸಿದರು. ಈ ಕುರಿತು ನಾನು ಮುತಾಲಿಕ್ ಅವರನ್ನು ಅಭಿನಂದಿಸುತ್ತೇನೆ. ನನ್ನ ಅವಶ್ಯಕತೆ ಇದ್ದರೆ ಸಹಕಾರ ಕೊಡುತ್ತೇನೆ. ನಮ್ಮ ನಗರದಲ್ಲಿ ಇಂತಹ ಸಹಾಯವಾಣಿಯ ಒಂದು ಶಾಖೆಯನ್ನು ಸ್ಥಾಪಿಸಲು ಅವರಿಗೆ ಸೂಚಿಸುತ್ತೇನೆ ಎಂದರು.
ಚನ್ನಗಿರಿಯಲ್ಲಿ ಅದಿಲ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ೭ ನಿಮಿಷದೊಳಗೆ ಸಾವನ್ನಪ್ಪುತ್ತಾನೆ. ಈ ಪ್ರಕರಣ ನೋಡಿದರೆ ನಮಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಠಾಣೆಗೆ ರಕ್ಷಣೆ ಒದಗಿಸುವ ಪರಿಸ್ಥಿತಿ ಬಂದಿದೆ. ರಾಜ್ಯ ಸರಕಾರ ಮುಸ್ಲಿಂ ಪರ ಇದೆ. ಘಟನೆ ಕುರಿತು ಸತ್ಯಾಂಶ ಅಂದೇ ವರದಿ ಬಂದಿದೆ. ಸಾವಿರಾರು ಜನರ ಮೆರವಣಿಗೆ ಮಾಡಿದ್ದಾರೆ. ಇದು ಮುಸ್ಲಿಂರ ಜಾಗೃತಿಯನ್ನು ತೋರಿಸುತ್ತದೆ ಎಂದರು.
ಇದೇ ರೀತಿ ಮಂಗಳೂರಿನ ಕಂಕನಾಡಿ ಮಸೀದಿ ಹತ್ತಿರದ ರಸ್ತೆಯಲ್ಲಿ ನಮಾಜು ಪ್ರಕರಣ ನಡೆದಿದೆ. ಇದನ್ನು ವಿರೋಧಿಸಿದ ಪೊಲೀಸ್ ಅಧಿಕಾರಿಯನ್ನೇ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಇದು ಯಾವುದೇ ಅನುಮತಿಯಿಲ್ಲದೆ ಈ ರೀತಿಯ ನಮಾಜಿಗೆ ಅವಕಾಶ ಕೊಟ್ಟಂತಾಗಿದೆ. ಈ ಕುರಿತು ಕಾನೂನು ತಂದು ಬಿಟ್ಟರೆ ಒಳ್ಳೆಯದಲ್ಲವೇ? ಇಂತಹ ಪ್ರಕರಣಗಳನ್ನು ವಿರೋಧಿಸುವುದಕ್ಕೆ ಒಬ್ಬ ಪೊಲೀಸ್ ಅಧಿಕಾರಿ ಇರುವುದು ಹೆಮ್ಮೆ. ರಾಜ್ಯ ಸರಕಾರ ಮುಸ್ಲಿಂ ಸರಕಾರ. ಸರಕಾರವೇ ನಮ್ಮ ಕರ್ನಾಟಕ ರಾಜ್ಯವು ಮುಸ್ಲಿಂ ರಾಜ್ಯ ಎಂದು ಘೋಷಣೆ ಮಾಡಿದರೆ ಒಳ್ಳೆಯದಲ್ಲವೇ? ಎಂದು ವ್ಯಂಗ್ಯವಾಡಿದರು.