೨ ಲಕ್ಷಕ್ಕೂ ಅಧಿಕ ಅಂತರದಲ್ಲಿ ಜಯಿಸಿದ ನನಗೆ ಜವಾಬ್ದಾರಿ ಹೆಚ್ಚಿದೆ

ಬಿಜೆಪಿ ಕಚೇರಿಯಲ್ಲಿ ವಿಜೇತ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿಕೆ

ಶಿವಮೊಗ್ಗ: ಸ್ವತಂತ್ರ ನಂತರ ಕಾಂಗ್ರೆಸ್ಸೇತರ ಪಕ್ಷವೊಂದು ಸತತ ೩ನೆ ಬಾರಿಗೆ ಸರಕಾರ ರಚಿಸುತ್ತಿರುವುದು ನಮ್ಮ ಪಕ್ಷವಾಗಿದೆ. ಇದಕ್ಕೆ ಬೆಂಬಲ ಸೂಚಿಸಿದ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಹಾಗೂ ಮೈತ್ರಿ ಪಕ್ಷವಾದ ಜೆಡಿಎಸ್  ಮತ್ತು ಅದರ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ೨ ಲಕ್ಷಕ್ಕೂ ಅಧಿಕ ಅಂತರದಲ್ಲಿ ಜಯಿಸಿದ ನನಗೆ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಜನರ ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ ವಿಜೇತ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಬುಧವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ ಅವರು ಲೋಕಸಭಾ ಚುನಾವಣೆಯಲ್ಲಿ ೨ ಡಿಜಿಟ್ ಅಂಕೆಯ ಸುಮಾರು ೨೦ ಸ್ಥಾನಗಳ ಗೆಲುವು ಸಾಧಿಸುತ್ತೇವೆ ಎಂದಿದ್ದರು. ರಾಜ್ಯದ ಜನ ನಮ್ಮ ನಿರೀಕ್ಷೆ ಮೀರಿ ಜಯಗಳಿಸಿದ್ದಾರೆ. ಅವರು ಸರಕಾರದ ಗ್ಯಾರಂಟಿ ಯೋಜನೆಗಳು, ಇತರೆ ಅಪಪ್ರಚಾರದಿಂದ ನಮ್ಮ ಶಕ್ತಿಯನ್ನು ಕುಂದಿಸಲು ಹವಣಿಸಿದರು. ಬಿಜೆಪಿ-ಜೆಡಿಎಸ್ ಮೈತ್ರಿಯು ಈಗ ೧೭ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ. ಪ್ರಜ್ಞಾವಂತ ಮತದಾರರು ತಮ್ಮ ದೂರದೃಷ್ಟಿಯಿಂದಾಗಿ ನಮ್ಮ ನಿರೀಕ್ಷೆ ಮೀರಿ ಗೆಲುವು ತಂದುಕೊಟ್ಟಿದ್ದಾರೆ. ಲೋಕಸಭೆಯ ಸದಸ್ಯನಾಗಿ ನಮ್ಮ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ ಈ ಗೆಲುವನ್ನು ಸಮರ್ಪಣೆ ಮಾಡುತ್ತೇನೆ ಎಂದು ತಿಳಿಸಿದರು.

ಒಂದು ವರ್ಷದಿಂದ ಬೂತ್ ಮಟ್ಟದಲ್ಲಿ ಪಕ್ಷ ವಹಿಸಿದ ಅನೇಕ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸಿದ್ದೇವೆ. ಮತ್ತೊಮ್ಮೆ ಬಿಜೆಪಿಯು ಅಧಿಕಾರಕ್ಕೆ ಬರಲು ಮತ್ತು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕನ್ಯಾಕುಮಾರಿಯಿಂದ ನಮ್ಮೆಲ್ಲರನ್ನುದ್ದೇಶಿಸಿ ಮೋದಿಯವರು ಬಹಿರಂಗ ಪತ್ರವನ್ನು ಬರೆದಿದ್ದರು. ೨೦೪೭ಕ್ಕೆ ನಮ್ಮ ದೇಶವು ಸ್ವತಂತ್ರಗೊಂಡು ೧೦೦ ವರ್ಷ ಪೂರೈಸುತ್ತದೆ. ಅಷ್ಟರೊಳಗೆ ನಮ್ಮ ದೇಶವನ್ನು ವಿಶ್ವಗುರು ಮಾಡಲು ಪಣತೊಡಬೇಕಿದೆ. ಈ ನಿಟ್ಟಿನಲ್ಲಿ ದೇಶದ ಕುರಿತು ಚಿಂತನೆ ಅಗತ್ಯವೆಂದು ಹೇಳಿದ್ದರು. ಇಂದು ವಿಶ್ವ ಪರಿಸರ ದಿನಾಚರಣೆಯಾಗಿದೆ. ಒಬ್ಬ ಚುನಾಯಿತಿ ಪ್ರತಿನಿಧಿಯಾಗಿ ಪರಿಸರವನ್ನು ಸಂರಕ್ಷಿಸಿಸಲು ಕಾರ್ಯಕರ್ತರಲ್ಲಿ ಕರೆ ಕೊಡುತ್ತೇನೆ. ಮಲೆನಾಡಿಗೆ ಧಕ್ಕೆ ಬಾರದಂತೆ ಪೂರಕ ವಾತಾವರಣ ನಿರ್ಮಿಸಲು ಮತ್ತು ಅಭಿವೃದ್ಧಿ ಪತದತ್ತ ಸಾಗುತ್ತೇನೆ ಎಂದು ಹೇಳಬಯಸುತ್ತೇನೆ. ದುಷ್ಟಶಕ್ತಿಗಳು ಮಾದಕ ದ್ರವ್ಯಗಳ ಮೂಲಕ ಯುವಶಕ್ತಿಯನ್ನು ರಾಕ್ಷಸರನ್ನಾಗಿ ಮಾಡುತ್ತಿವೆ. ಏನೇ ಆದರೂ ಸಮಾಜದಲ್ಲಿ ಶಾಂತಿ ನೆಲೆಸಲು ನಾವು ಪಣತೊಡುತ್ತೇವೆ. ಮಾದಕ ವಸ್ತುಗಳ ಮಾರಾಟ ಜಾಲ ತಡೆಗೆ ಪಕ್ಷದಲ್ಲಿ ಚರ್ಚೆ ಮಾಡಿದ್ದೇವೆ. ರಕ್ಷಣಾ ಅಧಿಕಾರಿಗಳನ್ನು ಭೇಟಿ ಮಾಡಿ ಕ್ರಮಕೈಗೊಳ್ಳಲು ಒತ್ತಾಯಿಸುತ್ತೇವೆ ಎಂದು  ಭರವಸೆ ನೀಡಿದರು.

ಚುನಾವಣಾ ಸಂದರ್ಭದಲ್ಲಿ ನಮ್ಮ ಕುರಿತು ಪ್ರಚಾರ-ಅಪಪ್ರಚಾರ ನಡೆದಿದೆ. ಇವೆಲ್ಲದಕ್ಕೂ ಮತದಾನದ ಮೂಲಕ ಜನರು ಉತ್ತರವನ್ನು ಕೊಟ್ಟಿದ್ದಾರೆ. ಮುಂಗಾರು ರೈತರಿಗೆ ಕೈಕೊಟ್ಟಿದೆ. ಯಾವುದೇ ಸರಕಾರ ಜನರಿಗೆ ವಿಶ್ವಾಸ ತುಂಬಲು ಕೆಲಸ ಮಾಡಬೇಕಿದೆ. ಕಳೆದ ವರ್ಷದ ವಿಧಾನಸಭೆ ಚುನಾವಣೆ ಮತ್ತು ಈಗಿನ ಲೋಕಸಭೆ ಚುನಾವಣೆಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಜಿಲ್ಲಾ ಆಡಳಿತಕ್ಕೆ ಚುರುಕು ಮುಟ್ಟಿಸಬೇಕಿದೆ. ಹೆಚ್ಚಿನ ಮತದಾರರು ನನಗೆ ಅಶೀರ್ವಾದ ಮಾಡಿದ್ದಾರೆ. ಬೆಂಬಲ ಸೂಚಿಸಿದ ಜೆಡಿಎಸ್ ನ ಕಟ್ಟಕಡೆಯ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಪತ್ರಿಕಾ ಮಾಧ್ಯಮದ ಸ್ನೇಹಿತರು ಕೇಂದ್ರದ ಯೋಜನೆಗಳು, ನಮ್ಮ ಪಕ್ಷದ   ಸಿದ್ದಾಂತಗಳನ್ನು ಪ್ರಚಾರ ಮಾಡಿದ್ದಾರೆ. ರಾಷ್ಟ್ರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಿದ ಇವರ ಸಹಕಾರವನ್ನು ನೆನೆಯುತ್ತೇನೆ. ಸಂಘ ಪರಿವಾರದ ಹಿರಿಯರು ನಮಗೆ ಉತ್ತಮ ಮಾರ್ಗದರ್ಶನ ಮಾಡಿದ್ದಾರೆ. ಅಶೀರ್ವಾದ ಮಾಡಿದ ಸಂಘದ ಪ್ರಮುಖರಿಗೆ ಹೃತ್ಪೂರ್ಕ ವಂದನೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಬಗುರು ಹುಕುಂ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸ್ಪಷ್ಟತೆ ತರುವಲ್ಲಿ ಶ್ರಮಿಸುತ್ತೇನೆ. ಕೇಂದ್ರದ ಬೆಂಬಲದೊಂದಿಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಲು ಶ್ರಮಿಸುತ್ತೇನೆ. ಶಿವಮೊಗ್ಗ ಮತ್ತು ಶಿವಮೊಗ್ಗ ಗ್ರಾಮಾಂತರದಲ್ಲಿ ಅತಿ ಹೆಚ್ಚಿನ ಅಂತರದ ಮತದಾನಕ್ಕೆ ಕಾರಣಕರ್ತರಾದ ಶಾಸಕ ಎಚ್‌.ಎಸ್.ಚನ್ನಬಸಪ್ಪ ಮುಂತಾದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ತಮ್ಮ ಕ್ಷೇತ್ರದಲ್ಲಿ ಕಡಿಮೆ ಮತದಾನದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಲ್ಲಿ ೮೭ ಸಾವಿರದ ಸಂಖ್ಯೆಯ ಗಡಿ ದಾಟಲು ಆಗುತ್ತಿಲ್ಲ. ತವರು ಮನೆಯವರಿಗೆ ನನ್ನ ಮೇಲೆ  ಪ್ರೀತಿ ಜಾಸ್ತಿ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ದೇಶದಲ್ಲಿ ನಮ್ಮ ನಿರೀಕ್ಷೆ ಕಡಿಮೆಯಾಗಿರುವ ಕುರಿತು ವಿಮರ್ಶೆ ಮಾಡುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎಚ್. ಚನ್ನಬಸಪ್ಪ, ಜಿಲ್ಲಾ ಅಧ್ಯಕ್ಷ ಟಿ.ಡಿ.ಮೇಘರಾಜ್, ಎಸ್.ದತ್ತಾತ್ರೇಯ, ಮಾಲತೇಶ, ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ, ಮೋಹನ್ ರೆಡ್ಡಿ ಮುಂತಾದವರು ಹಾಜರಿದ್ದರು.