ಬಿವೈಆರ್‌ ಗೆ ಹ್ಯಾಟ್ರಿಕ್‌ ಗೆಲುವು

ಮೋದಿ, ಬಿಎಸ್‌ ವೈ ಪ್ರಭಾವ, ಅಭಿವೃದ್ಧಿಯ ಚಿಂತನೆ

ಶಿವಮೊಗ್ಗ :  ಬಾರೀ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಅಭ್ಯರ್ಥಿಯಾಗಿದ್ದ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರ ವಿರುದ್ದ ೧. ೭೯ ಲಕ್ಷ ಮತಗಳ ಅಂತರದಿಂದ ಅವರು ಭರ್ಜರಿ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

 ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದಕೊಂಡು ಬಂದ ಅವರು, ಕೊನೆಯ ಸುತ್ತಿನ ತನಕವೂ ಅದೇ ಅಂತರ ಕಾಯ್ದುಕೊಂಡು ಬರುವ ಮೂಲಕ ಗೆಲುವಿನ ನಗೆ  ಬೀರಿದರು. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರು ಸತತ ಎರಡನೇ ಬಾರಿಗೂ ಸೋಲಿನ ಕಹಿ ಉಂಡಿದ್ದಾರೆನ್ನುವುದು ಮಾತ್ರವಲ್ಲದೆ, ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿ ಕೆ.ಎಸ್.‌ ಈಶ್ವರಪ್ಪ ಅವರು ತೀವ್ರ ಮುಖಭಂಗ ಅನುಭವಿಸಿದ್ದಾರೆ.

 ಮತ ಎಣಿಕೆಯ ೧೨ ಸುತ್ತಿನ ಹೊತ್ತಿಗೆ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ೫, ೧೧೫೬೫ ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿಇವರಾಜ್‌ ಕುಮಾರ್‌ ಅವರು ೩, ೫೭ ೧೬೧ ಮತ ಪಡೆದಿದ್ದರು. ಇನ್ನು ಪಕ್ಷೇತರ ಅಭ್ಯರ್ಥಿ ಕೆ.ಎಸ್.‌ ೨೦೬೪೫ ಮತ ಪಡೆದಿದ್ದರು. ಜಿದ್ದಾಜಿದ್ದಿಯ ಕಣದಲ್ಲಿ ಹಾಲಿ ಸಂಸದ  ಬಿ.ವೈ. ರಾಘವೇಂದ್ರ ಅವರು ಸತತ ಮೂರನೇ ಬಾರಿಗೆ ಸಂಸತ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು, ಮೋದಿ ನೇತೃತ್ವದ ಎನ್‌ ಡಿಎ ಸರ್ಕಾರದಲ್ಲಿ ಅವರು ಕೇಂದ್ರ ಸಚಿವರಾಗುತ್ತಾರೆಯೇ ಎನ್ನುವ ಕುತೂಹಲ ಈಗ ಮುನ್ನೆಲೆಗೆ ಬಂದಿದೆ.