ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಸೆಂಟರ್ ಆಫ ಇಂಡಿಯನ್ ಟ್ರೇಡ್ ಯುನಿಯನ್ಸ್ (ಸಿಐಟಿಯು)ನಿಂದ ಹರಿಹರ ತಾಲೂಕು ಕಾರ್ಮಿಕರ ಸಮಾವೇಶ ಆಯೋಜಿಸಲಾಗಿತ್ತು.
ಹರಿಹರ ನಗರಸಭೆಯ ಮಾಜಿ ಸದಸ್ಯ ಸುರೇಶ್ ತೆರದಹಳ್ಳಿ ಅವರು ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರನಪ್ಪ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿ, ಹರಿಹರದಲ್ಲಿ ಹೆಚ್ಚಿನ ಕಾರ್ಖಾನೆಗಳಿದ್ದು, ಫ್ಯಾಕ್ಟ್ರಿಯಲ್ಲಿ ಕೆಲಸ ಮಾಡುವವರಲ್ಲದೆ, ಕಟ್ಟಡ ಕಾರ್ಮಿಕರು, ಬೀದಿ ಬದಿ ಮಾರಾಟಗಾರರು, ಬೀಡಿ ಕಾರ್ಮಿಕರು, ಹಮಾಲಿಗಳು, ರಸ್ತೆ ಸಾರಿಗೆ ನೌಕರರು, ಆಟೋಚಾಲಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಫಾಲೀಫೈಬರ್, ಗ್ರಾಸಿಂ, ಇತರೆ ಕಂಪನಿಗಳಲ್ಲಿ ಕೆಲಸ ಮಾಡುವವರು ಸಂಘಟಿತರಾಗಿದ್ದಾರೆ. ಇತರೆಯವರು ಅಸಂಘಟಿತರಾಗಿದ್ದಾರೆ. ಆ ಕಾರಣದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದರು.
ಕಾರ್ಮಿಕರಿಗೆ ಸಾಮಾಜಿಕ ಯೋಜನೆಗಳ ಸೌಲಭ್ಯಗಳು ಸಮರ್ಪಕವಾಗಿ ದೊರಕುತ್ತಿಲ್ಲ. ಕಾರ್ಮಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪ್ರಧಾನ ಕಾರಣ ಕಾರ್ಮಿಕರು ಅಸಂಘಟಿತರಾಗಿರುವುದು. ಕಾರ್ಮಿಕರ ಪರವಾಗಿರುವ ಸಾಮಾಜಿಕ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿಸಲು ಎಲ್ಲಾ ಶ್ರಮಜೀವಿಗಳು ಒಟ್ಟಾಗಿ ಸಂಘಟಿತರಾಗಬೇಕಾಗಿದೆ. ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಒಟ್ಟು ಮಾಡುವ ಉದ್ದೇಶದಿಂದ ಕಾರ್ಮಿಕರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.
ಸಿಐಟಿಯುನ ದಾವಣಗೆರೆ ಜಿಲ್ಲಾ ಸಂಚಾಲಕ ಆನಂದರಾಜು ಕೆ.ಹೆಚ್. ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಪರವಾಗಿ ಕಾರ್ಮಿಕ ವಿರೋಧಿ ಕಾನೂನು ತಂದು ದೇಶದಲ್ಲಿ ಅಸಮಾನತೆ ಸೃಷ್ಟಿ ಮಾಡಿದೆ. ರಾಜ್ಯ ಸರ್ಕಾರ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನ ಪರಿಣಾಮಕಾರಿಯಾಗಿ ಜಾರಿಮಾಡುವಂತೆ ಭವಿಷ್ಯದಲ್ಲಿ ಹೋರಾಟ ರೂಪಿಸಬೇಕಿದೆ. ಹರಿಹರ ತಾಲೂಕಿನ ಕಟ್ಟಡ ಕಾರ್ಮಿಕರ ಮತ್ತು ರಸ್ತೆ ಸಾರಿಗೆ ನೌಕರರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿಸಲು ಸಿಐಟಿಯು ಸಂಘದ ಕಚೇರಿ ಆರಂಭಿಸಲಾಗಿದೆ. ಅದರ ಪ್ರಯೋಜನವನ್ನ ಕಾರ್ಮಿಕರು ಬಳಸಿಕೊಳ್ಳ ಬೇಕು ಎಂದು ಅವರು ಕರೆ ನೀಡಿದರು.
ಸಿಐಟಿಯು ಮುಖಂಡರಾದ ಮಲಿಯಪ್ಪ , ನೇತ್ರಾವತಿ, ಮಹದೇವಪ್ಪ ಮಣ್ಣೂರ್, ಕಟ್ಟಡ ಕಾರ್ಮಿಕ ಸಂಘದ ತಾಲೂಕು ಮುಖಂಡರಾದ ಅಬೂಸಲೆಹ, ರಾಜಾಸಾಬ್, ಹರಿಹರ ಪಾಲಿಫೈಬರ್ಸ್ ಕಾರ್ಮಿಕರ ಸಂಘದ ಸಂಚಾಲಕರಾದ ಕೊಟ್ರೇಶ್ ಹೆಚ್. ಓಲೇಕಾರ್, ರಾಮ್ಕೋ ಕಾರ್ಮಿಕರ ಸಂಘದ ಹನುಮಂತಪ್ಪ, ಬೀದಿ ಬದಿ ಮಾರಾಟಗಾರರ ಸಂಘದ ಸಂಚಾಲಕರಾದ ಕಾಂ.ಮಂಜಮ್ಮ ಡಿ., ಬೀಡಿ ಕಾರ್ಮಿಕರ ಸಂಘದ ಸಂಚಾಲಕರಾದ ಕಾಂ.ಅಶ್ಪಕ್ ಆಹಮದ್ ಹಾಗೂ ಇತರೆಯರು ಸಮಾವೇಶದಲ್ಲಿ ಇದ್ದರು.
……………………………………………….
ಕೇಂದ್ರದ ಬಿಜೆಪಿ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಪರವಾಗಿ ಕಾರ್ಮಿಕ ವಿರೋಧಿ ಕಾನೂನು ತಂದು ದೇಶದಲ್ಲಿ ಅಸಮಾನತೆ ಸೃಷ್ಟಿ ಮಾಡಿದೆ. ರಾಜ್ಯ ಸರ್ಕಾರ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನ ಪರಿಣಾಮಕಾರಿಯಾಗಿ ಜಾರಿಮಾಡುವಂತೆ ಭವಿಷ್ಯದಲ್ಲಿ ಸಿಐಟಿಯು ನಿಂದ ರೂಪಿಸಬೇಕಿದೆ.
-ಆನಂದರಾಜು ಕೆ. ಹೆಚ್., ಸಿಐಟಿಯು ಜಿಲ್ಲಾ ಸಂಚಾಲಕ.