ಬೆಂಗಳೂರು ದೂರದರ್ಶನ ಕೇಂದ್ರಕ್ಕೆ ಉಪ ಮಹಾನಿರ್ದೇಶಕರಾಗಿಕಳೆದ 3 ತಿಂಗಳ ಹಿಂದೆ ದಲಿತ ಸಮುದಾಯಕ್ಕೆ ಸೇರಿದ ಅಧಿಕಾರಿ ಭಾಗ್ಯವಾನ್ ಎಂಬುವವರನ್ನು ನೇಮಿಸಲಾಗಿದೆ. ಆದರೆ, ನಿರ್ದೇಶಕರಿಗೆ ಮೀಸಲಾಗಿರುವ ಕೊಠಡಿಯನ್ನು ಅವರಿಗೆ ನೀಡದೆ, ಸಿಬಿಐ ತನಿಖೆ ಎದುರಿಸುತ್ತಿರುವ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೀದರ್ ಮೂಲದ ಭಾಗ್ಯವಾನ್ ಅವರು ದಲಿತ ಸಮುದಾಯಕ್ಕೆ ಸೇರಿರುವ ಕನ್ನಡಿಗ ಅಧಿಕಾರಿಯಾಗಿದ್ದಾರೆ. ಕೇಂದ್ರ ಸರ್ಕಾರ ಸ್ವಾಮ್ಯದ ದೂರದರ್ಶನ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಅಧಿಕಾರಿಯಾಗಿ ಕಳೆದ 26 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಕಳೆದ ನಲ್ವತ್ತು ವರ್ಷಗಳಿಂದ ಕಾರ್ಯಕ್ರಮ ನಿರ್ದೇಶಕರಿಗೆಂದು ಮೀಸಲಿಟ್ಟಿದ್ದ ಕೊಠಡಿಯನ್ನು ಅವರಿಗೆ ನೀಡದೆ, ಕೆಲಸ ಮಾಡಲು ಅಗತ್ಯವಿರುವ ಕಂಪ್ಯೂಟರ್ ಸಹ ಒದಗಿಸದೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ನಾನು ಕಚೇರಿಯ ಕಾರಿಡಾರ್‌ನಲ್ಲೇ ಕೂತು ಕೆಲಸ ಮಾಡುತ್ತಿದ್ದೇನೆ. ಸಂದರ್ಶಕರು ಕಾಯುವ (ವಿಸಿಟರ್ಸ್ ವೇಯ್ಟಿಂಗ್ ಹಾಲ್) ಹಾಲ್‌ನಲ್ಲೇ ಕುಳಿತು ಕಚೇರಿ ಕೆಲಸ ಮಾಡುತ್ತಿದ್ದೇನೆ. ನನಗೆ ಕಿರುಕುಳ ನೀಡುತ್ತಿರುವ ಇಬ್ಬರೂ ಅಧಿಕಾರಿಗಳ ವಿರುದ್ಧ ಸಿಬಿಐ ವಿಚಾರಣೆ ನಡೆಸುತ್ತಿದೆ. ನಮ್ಮ ದೂರದರ್ಶನ ನಿಯಮಗಳ ಪ್ರಕಾರ, ವಿಚಾರಣೆಗೆ ಒಳಪಟ್ಟಿರುವ ಯಾವುದೇ ಅಧಿಕಾರಿಗೆ ಹುದ್ದೆ ನೀಡಬಾರದು ಎಂದು ಹೇಳುತ್ತದೆ. ಆದರೆ, ಅವರಿಗೆ ಹೆಚ್ಚುವರಿಯಾಗಿ ಮೂರುಮೂರು ಜವಾಬ್ದಾರಿ ನೀಡಿದ್ದಾರೆ ಎಂದು ವಿವರಿಸಿದರು.
“ಇಡೀ ದೇಶಕ್ಕೆ ಕಾರ್ಯಕ್ರಮ ವಿಭಾಗದ ನಿರ್ದೇಶಕನಾಗಿರುವ ಡೆಪ್ಯೂಟಿ ಡೈರೆಕ್ಟರ್ ಜನರಲ್ ನಾನೊಬ್ಬನೆ; ಅದು ಬಿಟ್ಟು ಈ ವಿಭಾಗಕ್ಕೆ ಸಂಬಂಧ ಇಲ್ಲದವರಿಗೆಲ್ಲಾ ಹೆಚ್ಚುವರಿ ಚಾರ್ಜ್ ನೀಡಿದ್ದಾರೆ. ಅವರಿಗೆ ದೂರದರ್ಶನದ ಅನುಭವವೇ ಇಲ್ಲ; ಆದರೂ ನನ್ನ ಕೆಲಸವನ್ನು ಅವರು ಮಾಡುತ್ತಿದ್ದಾರೆ. ನಾನು ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಓದಿ ಕೆಲಸ ಪಡೆದುಕೊಂಡಿದ್ದೇನೆ. ಕಾರ್ಯಕ್ರಮ ನಿರ್ದೇಶಕರಿಗೆ ಮೀಸಲಿರುವ ಕೊಠಡಿಯನ್ನು ನನಗೆ ಬಿಟ್ಟುಕೊಡಬೇಕು; ಕಳೆದ ನಲವತ್ತು ವರ್ಷಗಳಿಂದ ಆ ಕಚೇರಿ ನಿರ್ದೇಶಕರಿಗೆ ಮೀಸಲಿತ್ತು ಎನ್ನುವುದಕ್ಕೆ ಎಲ್ಲರ ಬಳಿ ಸಾಕಷ್ಟು ಪುರಾವೆಗಳಿವೆ. ನಾನು ಕೇಳಿದರೆ ಒಬ್ಬರ ಮೇಲೆ ಒಬ್ಬರು ಹೇಳುತ್ತಾ ದಿನದೂಡುತ್ತಿದ್ದಾರೆ” ಎಂದರು.